ಫೆ.24ರಿಂದ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-8’
ಉಡುಪಿ, ಫೆ.21: ನಾಟಕ, ಸಾಹಿತ್ಯ, ಯಕ್ಷಗಾನ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆಗಳನ್ನು ಮಾಡುತ್ತಿರುವ ಸುಮನಸಾ ಕೊಡವೂರು ಇದೇ ಫೆ.24ರಿಂದ ಮಾ.1ರವರೆಗೆ ‘ರಂಗಹಬ್ಬ-8’ ನಾಟಕೋತ್ಸವವನ್ನು ಉಡುಪಿಯ ಭುಜಂಗ ಪಾರ್ಕ್‌ನ ಬಯಲು ರಂಗಮಂದಿರ ದಲ್ಲಿ ಆಯೋಜಿಸಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ನಗರಸಭೆ ಉಡುಪಿ, ಸಂಸ್ಕೃತಿ ನಿದೇಶನಾಲಯ ಹೊಸದಿಲ್ಲಿ ಹಾಗೂ ಶ್ರೀಪೇಜಾವರ ಅಧೋಕ್ಷಜ ಮಠಗಳ ಸಹಯೋಗದೊಂದಿಗೆ ಈ ಬಾರಿಯ ನಾಟಕೋತ್ಸವ ನಡೆಯಲಿದೆ ಎಂದರು.
ನಾಟಕೋತ್ಸವವನ್ನು ಫೆ.24ರ ಸೋಮವಾರ ಸಂಜೆ 6:30ಕ್ಕೆ ಮೂಡಬಿದರೆ ಆಳ್ವಾಸ್ ಎಜ್ಯುಕೇಷನ್ ಫೌಂಡೇಷನ್‌ನ ಅಧ್ಯಕ್ಷ ಡಾ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ.1ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ವಹಿಸಲಿದ್ದಾರೆ. ಪ್ರತಿದಿನ ರಂಗಸಾಧಕರಿಗೆ ಸನ್ಮಾನ ಹಾಗೂ ಅದೃಷ್ಟವಂತ ಪ್ರೇಕ್ಷಕರಿಗೆ ಉಡುಗೊರೆಯನ್ನು ನೀಡಲಾಗುವುದು ಎಂದರು.
ಪ್ರತಿದಿನ ಸಂಜೆ 6:30ಕ್ಕೆ ನಾಟಕ ಪ್ರದರ್ಶನ ಆರಂಭಗೊಳ್ಳಲಿದೆ. ಮೊದಲ ದಿನ ಲಾವಣ್ಯ ಬೈಂದೂರು ಇವರಿಂದ ‘ಮುದ್ದಣ ಪ್ರಮೋಷನ್ ಪ್ರಸಂಗ’, ಬಳಿಕ ಕ್ರಮವಾಗಿ ಸುಮನಸಾ ಕೊಡವೂರು ಇವರಿಂದ ಬಾಲಕೃಷ್ಣ ಶಿಬಾರ್ಲರ ರಚನೆ ‘ಕಾಪ’, ಮಂದಾರ ಬೈಕಾಡಿ ಇವರಿಂದ ‘ಕೊಳ್ಳಿ’, ಸುಮನಸಾ ಕೊಡವೂರು ಇವರಿಂದ ‘ಗದಾಯುದ್ಧ’, ಧಾರವಾಡ ಟೂರಿಂಗ್ ಟಾಕೀಸ್ ಇವರಿಂದ ‘ಹುಚ್ಚರ ಸಂತೆ’, ಮಂಗಳೂರಿನ ಜರ್ನಿ ಥೇಟರ್ ಗ್ರೂಪ್‌ನಿಂದ ತುಳು ನಾಟಕ ‘ಗೋಂದೋಳು’ ಹಾಗೂ ಕೊನೆಯ ದಿನದಂದು ಸುಮನಸಾ ಕೊಡವೂರು ಇವರಿಂದ ‘ಪುಟಗೋಸಿ ಮನುಷ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರತಿದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ರಂಗಸಾಧಕರಿಗೆ ಸನ್ಮಾನ ನಡೆಯಲಿದೆ. ಮೊದಲ ಆರು ದಿನಗಳಂದು ಕ್ರಮವಾಗಿ ನಟರಾಜ್ ದೀಕ್ಷಿತ್, ಕೃಷ್ಣರಾಜ್ ವಡಬಾಂಡೇಶ್ವರ, ರತ್ನಾಕರ ಕಲ್ಯಾಣಿ, ಕೇಶವರಾವ್ ಬಡಾನಿಡಿಯೂರು, ಕಾಪು ಲೀಲಾಧರ ಶೆಟ್ಟಿ, ಅಶೋಕ ಸುವರ್ಣರನ್ನು ಸನ್ಮಾನಿಸಲಾಗುವುದು.
ಕೊನೆಯ ದಿನದಂದು ಯಕ್ಷಗುರು ಯು.ದುಗ್ಗಪ್ಪರ ಸ್ಮರಣೆಯಲ್ಲಿ ನೀಡುವ ‘ಯಕ್ಷ ಸುಮ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನ ಗುರುವ ಕೆ.ನಾರಾಯಣ ಬನ್ನಂಜೆ ಅವರಿಗೆ ನೀಡಿ ಗೌರವಿಸಲಾಗುವುದು. ಅಲ್ಲದೇ ಸಮಾರೋಪ ಸಮಾರಂಭದಲ್ಲಿ ರಂಗನಿರ್ದೇಶಕ, ಸಾಹಿತಿ ಗುರುರಾಜ್ ಮಾರ್ಪಳ್ಳಿ ಇವರ ‘ಲಹರಿಯ ಕಡಲು’ ಕವನ ಸಂಕಲನವನ್ನು ಹಿರಿಯ ಚಿಂತಕ ಲಕ್ಷ್ಮಿಶ ತೋಳ್ಪಾಡಿ ಬಿಡುಗಡೆಗೊಳಿಸಲಿದ್ದಾರೆ ಎಂದೂ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯ್‌ಕುಮಾರ್, ಗಣೇಶ್ ಎಲ್ಲೂರು, ಕಾರ್ಯದರ್ಶಿ ಜೀವನ್ ಕುಮಾರ್ ಹಾಗೂ ಕೋಶಾಧಿಕಾರಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು.