ಒಂಟಿ ಮಹಿಳೆಯ ಕೊಲೆ ಪ್ರಕರಣ : ಆರೋಪಿಗಳಿಂದ 7ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

Update: 2020-02-21 17:07 GMT

ಉಡುಪಿ, ಫೆ.21: ಪುತ್ತೂರು ಗ್ರಾಮದ ವಿಷ್ಣುಮೂರ್ತಿ ನಗರದಲ್ಲಿ ಫೆ.12ರ ರಾತ್ರಿ ಒಂಟಿ ಮಹಿಳೆ ಮಾಲತಿ ಕಾಮತ್ (68) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಬೆಳಗಾವಿಯ ಇಬ್ಬರನ್ನು ಬಂಧಿಸಿದ್ದು, ಅವರಿಂದ ಏಳು ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳು ಮತ್ತು 8000 ರೂ. ನಗದು ಹಣದೊಂದಿಗೆ ಸ್ವಾಧೀನ ಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಆನಂದ(28) ಹಾಗೂ ಅಶೋಕ್(38) ಬಂಧಿತ ಆರೋಪಿಗಳು.

ಇವರು ಫೆ.12ರಂದು ರಾತ್ರಿ ವೇಳೆ ಒಂಟಿಯಾಗಿ ವಾಸಮಾಡಿ ಕೊಂಡಿದ್ದ ಮಾಲತಿ ಕಾಮತ್‌ರ ಮುಖ ಹಾಗೂ ಮೂಗಿನ ಭಾಗಕ್ಕೆ ತಲೆದಿಂಬಿ ನಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಅವರ ಮೈಮೇಲಿದ್ದ ಹಾಗೂ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಮತ್ತು 60,000ರೂ. ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಇವರನ್ನು ಖಚಿತ ಮಾಹಿತಿ ಯಂತೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದ ತಂಡ ಫೆ.18ರಂದು ಬಂಧಿಸಿ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ಒಂದು ವಾರ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

ಬಳಿಕ ತನಿಖಾ ತಂಡ ಆರೋಪಿಗಳಿಬ್ಬರೊಂದಿಗೆ ಬೆಳಗಾವಿಗೆ ತೆರಳಿ ಅವರು ಸುಲಿಗೆ ಮಾಡಿದ್ದ 7ಲಕ್ಷ ರೂ. ಮೌಲ್ಯದ 220.360ಗ್ರಾಂ ಚಿನ್ನಾಭರಣ, 114.540ಗ್ರಾಂ ತೂಕದ ಬೆಳ್ಳಿ ನಾಟ್ಯ ಹಾಗೂ 8000 ರೂ. ನಗದನ್ನು ಆರೋಪಿಗಳು ತೋರಿಸಿಕೊಟ್ಟಂತೆ ವಶಕ್ಕೆ ಪಡೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News