ಬೀದಿ ಪಾಲಾಗುವ ಪ್ರಾಣಿಗಳಿಗೆ ಹೀಗೊಂದು ಆಸರೆ

Update: 2020-02-22 09:10 GMT

ಮಂಗಳೂರು, ಫೆ. 22: ಲವ್ 4 ಪಾವ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ ಇಂದು ನಗರದ ಮಲ್ಲಿಕಟ್ಟೆ ಮಾರುಕಟ್ಟೆ ಬಳಿ ನಡೆಯುತ್ತಿದೆ.

ವಿಶೇಷವೆಂದರೆ ಇಲ್ಲಿ ಬೀದಿ ಪಾಲಾದ, ಮಾರುಕಟ್ಟೆ ಬಳಿ ಅನಾಥವಾಗಿ ಬಿಟ್ಟು ಹೋದ ದೇಸಿ ತಳಿಯ ನಾಯಿ ಹಾಗೂ ಬೆಕ್ಕಿನ ಮರಿಗಳನ್ನು ಈ ಟ್ರಸ್ಟ್‌ನವರು ರಕ್ಷಿಸಿ ಅವುಗಳನ್ನು ಪ್ರೀತಿಯಿಂದ ಸಲಹಿ ಪೋಷಿಸುವರಿಗೆ ದತ್ತು ನೀಡುವ ಪ್ರಕ್ರಿಯೆಯನ್ನು ನಡೆಸುತ್ತಾರೆ. ಕಳೆದ ಸುಮಾರು ಒಂದು ವರ್ಷದಿಂದ ತಮ್ಮ ಟ್ರಸ್ಟ್ ಕಾರ್ಯಾಚರಿಸುತ್ತಿರುವುದಾಗಿ ಹೇಳುವ ಟ್ರಸ್ಟ್‌ನ ಉಷಾ ಸುವರ್ಣ, ಕಳೆದ ಒಂದು ವರ್ಷದಲ್ಲಿ ನಗರದ ವಿವಿಧ ಮಾರುಕಟ್ಟೆ ಸಮೀಪದಿಂದ ರಕ್ಷಿಸಲ್ಪಟ್ಟ ಅನಾಥ ಸುಮಾರು 300ರಷ್ಟು ನಾಯಿ ಮರಿಗಳನ್ನು ಹಾಗೂ 200ರಷ್ಟು ಬೆಕ್ಕಿನ ಮರಿಗಳನ್ನು ದತ್ತು ನೀಡಿರುವುದಾಗಿ ಹೇಳುತ್ತಾರೆ.

ಸಾಮಾನ್ಯವಾಗಿ ತಿಂಗಳಿಗೆ ಎರಡು ಬಾರಿ ಇಂತಹ ದತ್ತು ನೀಡುವ ಪ್ರಕ್ರಿಯೆಗಳನ್ನು ನಗರದ ವಿವಿಧ ಕಡೆಗಳಲ್ಲಿ ಇವರು ನಡೆಸುತ್ತಾರಂತೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಇಂದು 11 ನಾಯಿ ಮರಿಗಳು ಹಾಗೂ 10 ಬೆಕ್ಕಿನ ಮರಿಗಳನ್ನು ದತ್ತು ಪ್ರಕ್ರಿಯೆಗೆ ಇರಿಸಲಾಗಿದೆ. ದತ್ತು ನೀಡುವ ಜತೆಗೆ ಉಚಿತ ಲಸಿಕೆಯನ್ನೂ ನಾವು ನೀಡುತ್ತೇವೆ. ದತ್ತು ಪಡೆಯುವವರಿಂದ ನಾವು ಯಾವುದೇ ರೀತಿಯ ಹಣವನ್ನುಪಡೆಯುವುದಿಲ್ಲ. ಟ್ರಸ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಸದಸ್ಯರೇ ಈ ಪ್ರಕ್ರಿಯೆಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ಉಷಾ ಸುವರ್ಣ ಹೇಳುತ್ತಾರೆ.

‘‘ಬಹುತೇಕವಾಗಿ ಮಾರುಕಟ್ಟೆ ಬಳಿ ಹೆಣ್ಣು ನಾಯಿ ಹಾಗೂ ಬೆಕ್ಕಿನ ಮರಿಗಳನ್ನು ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಅವುಗಳು ಆಹಾರವಿಲ್ಲದೆ ಸಾವಿಗೀಡಾದರೆ, ಮತ್ತೆ ಕೆಲವೊಮ್ಮೆ ವಾಹನಗಳಡಿ ಸಿಲುಕಿ ಜೀವ ಕಳೆದುಕೊಳ್ಳುತ್ತವೆ. ಇದರಿಂದ ಕನಿಕರಗೊಂಡು ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಕ್ಕೆ ಹೋಗುವವರು. ಪ್ರಸ್ತುತ 8 ಮಂದಿ ನಾವು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಹೆಚ್ಚಾಗಿ ರವಿವಾರದಂದು ನಾವು ಈ ಶಿಬಿರವನ್ನು ನಡೆಸುತ್ತೇವೆ’’ ಎನ್ನುತ್ತಾರೆ ಉಷಾ ಸುವರ್ಣ.

ಬೀದಿ ಪಾಲಾಗಿ, ಅನಾಥವಾಗುವ ಮೂಕ ಪ್ರಾಣಿಗಳಿಗೆ ದತ್ತು ಪ್ರಕ್ರಿಯೆ ಮೂಲಕ ಆಶ್ರಯ ಒದಗಿಸುವ ಕಾರ್ಯವನ್ನು ಈ ಯುವ ಸಮುದಾಯ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡು ಮಾಡುತ್ತಿದೆ.

ಪ್ರಾಣಿಗಳಲ್ಲೂ ಹೆಣ್ಣೆಂದರೆ ಹೆಚ್ಚು ನಿರ್ಲಕ್ಷ !
ಈ ಪ್ರಾಣಿಗಳ ಮರಿಗಳಲ್ಲೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗುವುದು ಹೆಣ್ಣು ಮರಿಗಳು. ತಮ್ಮ ಮನೆಯಲ್ಲಿ ಸಾಕಿದ ನಾಯಿ ಅಥವಾ ಬೆಕ್ಕುಗಳ ಹೆಣ್ಣು ಮರಿಗಳು ಬೆಳೆದು ಮತ್ತೆ ಮರಿ ಹಾಕಿ ಸಂತಾನ ವೃದ್ಧಿ ಮಾಡುವ ಕಾರಣಕ್ಕೆ ಮರಿಗಳನ್ನು ಮಾರುಕಟ್ಟೆಗಳಲ್ಲಿ ಅನಾಥವಾಗಿಸಲಾಗುತ್ತದೆ. ಗಂಡು ಮರಿಗಳಿದ್ದರೆ, ಪ್ರಾಣಿ ಪ್ರಿಯರು ಅಲ್ಲಿಂದ ಕೊಂಡೊಯ್ಯುತ್ತಾರೆ. ಉಳಿದಂತೆ ಈ ಹೆಣ್ಣು ಮರಿಗಳೇ ಬಹುತೇಕವಾಗಿ ಅನಾಥವಾಗಿ ಸಾವಿಗೀಡಾಗುತ್ತವೆ. ಹಾಗಾಗಿ ನಾವು ರಕ್ಷಿಸಿದ ಹೆಣ್ಣು ಮರಿಗಳನ್ನು ದತ್ತು ನೀಡುವ ವೇಳೆ ಅವುಗಳಿಗೆ ಲಸಿಕೆ ಹಾಕುವ ಕಾರ್ಯವನ್ನೂ ಮಾಡುತ್ತೇವೆ. ಮತ್ತೆ ಅವುಗಳು ಮರಿ ಹಾಕಿ ಅವುಗಳನ್ನು ಬೀದಿ ಪಾಲಾಗಿಸಬಾರದೆಂಬ ಕಾರಣಕ್ಕೆ.
- ಉಷಾ ಸುವರ್ಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News