ಅತ್ಯಾಚಾರ ಆರೋಪ ಹೊತ್ತ ಬಿಜೆಪಿ ಶಾಸಕನಿಗೆ ಕ್ಲೀನ್ ಚಿಟ್ ನೀಡಿದ ಪೊಲೀಸರು

Update: 2020-02-22 10:44 GMT
ರವೀಂದ್ರನಾಥ್ ತ್ರಿಪಾಠಿ

ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಅವರ ಹೆಸರು ಎಫ್‍ಐಆರ್ ನಲ್ಲಿ ಉಲ್ಲೇಖಗೊಂಡಿರುವ ಹೊರತಾಗಿಯೂ ತನಿಖೆಯಿಂದ ಅವರ ವಿರುದ್ಧದ ಆರೋಪ ಸುಳ್ಳು ಎಂದು ತಿಳಿದು ಬಂದಿದೆ ಎಂದು ಹೇಳಿಕೊಂಡು ಭದೋಹಿ ಪೊಲೀಸರು ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ ಶಾಸಕನ ಸೋದರಳಿಯನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಭದೋಹಿ ಎಸ್‍ಪಿ ರಾಮ್ ಬದನ್ ಸಿಂಗ್ ನೀಡಿದ ಮಾಹಿತಿಯಂತೆ 2016 ಹಾಗೂ 2017 ನಡುವೆ ಮಹಿಳೆಯೊಬ್ಬಳ ಮೇಲೆ ನಡೆದ ಸತತ ಅತ್ಯಾಚಾರ ಪ್ರಕರಣದಲ್ಲಿ ಶಾಸಕ, ಆತನ ಪುತ್ರರು ಹಾಗೂ ಸೋದರಳಿಯಂದಿರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. "ಆದರೆ ವಿಸ್ತೃತ ತನಿಖೆ ಹಾಗೂ ಸಂಬಂಧಿತರ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಶಾಸಕ, ಆತನ ಮೂವರು ಪುತ್ರರು ಹಾಗೂ ಇಬ್ಬರು ಸೋದರಳಿಯಂದಿರ ವಿರುದ್ಧದ ಆರೋಪ ಸುಳ್ಳೆಂದು ತಿಳಿದು ಬಂತು,'' ಎಂದು ಎಸ್‍ಪಿ ಹೇಳಿದ್ದಾರೆ.

"ಶಾಸಕನಿಗೆ ನಾವು ಕ್ಲೀನ್ ಚಿಟ್ ನೀಡಿದ್ದೇವೆ. ಆದರೆ ಅವರ ಮೂರನೇ ಸೋದರಳಿಯನ ವಿರುದ್ಧ ಆರೋಪ ನಿಜವೆಂದು ತಿಳಿದು ಬಂದಿದ್ದು ಆತನನ್ನು ಬಂಧಿಸಿದ್ದೇವೆ,'' ಎಂದು ಎಸ್‍ಪಿ ತಿಳೀಸಿದ್ದಾರೆ.

ವಾರಣಾಸಿ ನಿವಾಸಿಯಾಗಿರುವ ಸಂತ್ರಸ್ತೆಯ ದೂರಿನ ಪ್ರಕಾರ 2016ರಲ್ಲಿ ತ್ರಿಪಾಠಿಯ ಸೋದರಳಿಯ ಆಕೆಯನ್ನು ವಿವಾಹವಾಗುವ ಭರವಸೆ ನೀಡಿ  ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ, ಮುಂದೆ 2017ರಲ್ಲಿ ಆಕೆಯನ್ನು ಭದೋಹಿಯ ಹೋಟೆಲ್‍ನಲ್ಲಿರಿಸಿ ಅಲ್ಲಿ ತ್ರಿಪಾಠಿ, ಆತನ ಮೂವರು ಪುತ್ರರು ಹಾಗೂ ಇಬ್ಬರು ಸೋದರಳಿಯಂದಿರು ಸತತ  ಅತ್ಯಾಚಾರ ನಡೆಸಿದ್ದರೆಂದು ಆಕೆ ಆರೋಪಿಸಿದ್ದು, ಆಕೆ ಗರ್ಭಿಣಿಯೆಂದು ತಿಳಿದ ನಂತರ ಆಕೆಯನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎಂದೂ ಆಕೆ ದೂರಿದ್ದಾಳೆ.

ಆದರೆ ಶಾಸಕ ಮಾತ್ರ ಆರೋಪ ಸುಳ್ಳು ಇದು ರಾಜಕೀಯ ಪಿತೂರಿ ಎಂದು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News