ಮಹಿಳಾ ಮೀನು ಮಾರಾಟಗಾರರಿಗೂ ಕ್ರೆಡಿಟ್ ಕಾರ್ಡ್ ವಿಸ್ತರಿಸಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-02-22 12:36 GMT

ಉಡುಪಿ, ಫೆ.22: ಕೃಷಿಕರಿಗೆ ಮಾತ್ರ ನೀಡಲಾಗುತ್ತಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು ಇದೀಗ ಮೀನುಗಾರರಿಗೂ ವಿಸ್ತರಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ 2699 ಮಂದಿಯಲ್ಲಿ 420 ಮಂದಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಮುಂದೆ ಇದನ್ನು ಮೀನು ವ್ಯಾಪಾರ ಮಾಡುವ ಮಹಿಳೆಯರಿಗೂ ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಮತ್ತು ಮೀನುಗಾರಿಕೆ ಇಲಾಖೆಯ ವತಿಯಿಂದ ಉಡುಪಿ ತಾಪಂ ಸಭಾಂಗಣದಲ್ಲಿಶನಿವಾರ ಆಯೋಜಿಸಲಾದ ಮೀನುಗಾರಿಕೆ ಮಾಹಿತಿ ಕಾರ್ಯಗಾರ ಮತ್ತು ಸವಲತ್ತು ವಿತರಣಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸದ್ಯ ಮೀನು ಉತ್ಪಾದನೆ ಮಾಡುವ ಬೋಟು, ದೋಣಿ ಮೀನುಗಾರಿಕೆ, ಬಂಜರ ಕೃಷಿ, ಕೆರೆ, ಸರೋವರ ಮೀನುಗಾರಿಕೆಯವರಿಗೆ ಮಾತ್ರ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದರಲ್ಲಿ ಗರಿಷ್ಠ ಮೂರು ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಮುಂದೆ ವ್ಯಾಪಾರ ಮಾಡುವ ವರಿಗೂ ಇದನ್ನು ನೀಡಲು ಪ್ರಯತ್ನ ಮಾಡಲಾಗುವುದು ಎಂದರು.

ಕರಾವಳಿ ಜಿಲ್ಲೆಗಳ 23ಸಾವಿರ ಮಹಿಳಾ ಮೀನುಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ತಲಾ 50000ರೂ. ಸಾಲವನ್ನು ಮಾತ್ರ ಮನ್ನಾ ಮಾಡಲಾಗಿದೆ. ಈ ಹಣ ಅವರ ಖಾತೆಗೆ ಜಮೆ ಆಗುತ್ತಿದ್ದರೆ ಬ್ಯಾಂಕಿನಲ್ಲಿರುವ ಅನುತ್ಪಾದಕ ಸಾಲ ತೆರವುಗೊಳ್ಳಲಿದೆ. ಇನ್ನು ಯಾವುದೇ ಸಾಲ ಮನ್ನಾ ಮಾಡುವ ಯೋಜನೆ ಸರಕಾರದ ವುುಂದೆ ಇಲ್ಲ ಎಂದು ಅವರು ತಿಳಿಸಿದರು.

ಕಡಲ ಕಿನಾರೆಯಲ್ಲಿ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ತೇಲುವ ಜಟ್ಟಿ ಸೇರಿದಂತೆ ಮೀನುಗಾರಿಕೆಯನ್ನು ಉತ್ತೇಜಿಸಲು ಹಲವಾರು ಯೋಜನೆ ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೀನುಗಾರರ ಗಮನಕ್ಕೆ ತಾರದೆ ಯಾವುದೇ ಯೋಜನೆಗಳನ್ನು ಜಾರಿಗೆ ತರುವುದಿಲ್ಲ. ಮೀನುಗಾರಿಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನೂ ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಅವರು ಹೇಳಿದರು.

ಹೆಜಮಾಡಿ ಬಂದರು ಕಾಮಗಾರಿಗಾಗಿ 34 ಎಕರೆ ಜಾಗ ಈಗಾಗಲೇ ಸ್ವಾಧೀನ ಪಡಿಸಿಕೊಂಡಿದ್ದು, 12 ಎಕರೆ ಖಾಸಗಿ ಜಾಗದ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಸುಮಾರು 134 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮಂಗಳೂರು ಮೂರನೆ ಹಂತದ ಮೀನುಗಾರಿಕಾ ಬಂದರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂದರು.

ಬಂಜರ ಕೃಷಿ ಮೀನುಗಾರಿಕೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದರಿಂದಾಗಿ ನಿರು ದ್ಯೋಗಿ ಯುವಕರಿಗೆ ಉದ್ಯೋಗ ದೊರಕಲಿದೆ. ರಾಜ್ಯದ 11 ಕಡೆಗಳಲ್ಲಿ ಮತ್ಸ್ಯಗಂಧಿ ಯೋಜನೆಯನ್ನು ಜಾರಿಗೆ ತರಲಾುತ್ತಿದೆ ಎಂದು ಸಚಿವರು ತಿಳಿಸಿದರು.

ಉಡುಪಿ ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ,ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ರಾಜ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಫಲಾನುಭವಿ ಮೀನುಗಾರರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಉಡುಪಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪಿ.ಪಾರ್ಶ್ವನಾಥ ಸ್ವಾಗತಿಸಿದರು.ಉಪನಿರ್ದೇಶಕ ಗಣೇಶ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕ ಕಿರ್ ಬಿ.ಡಿ. ಕಾರ್ಯಕ್ರಮ ನಿರೂಪಿಸಿದರು.

ಒಳನಾಡು ಮೀನುಗಾರಿಕೆಯಲ್ಲಿ ಬದಲಾವಣೆ

ಒಳನಾಡು ಮೀನುಗಾರಿಕೆಯನ್ನು ಅಭಿವೃದ್ಧಿಗೊಳಿಸುವ ಮತ್ತು ಮೀನು ಗಾರಿಕೆ ಮಾಡುವವರಿಗೆ ಸ್ವಾಯತ್ತತೆ ಸಿಗಬೇಕೆಂಬ ಉದ್ದೇಶದಿಂದ ಸಾಕಷ್ಟು ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಕೆರೆಗಳನ್ನು ಮೀನುಗಾರರೇ ನಿರ್ವಹಣೆ ಮಾಡುವಂತೆ ಯೋಜನೆ ರೂಪಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯದ ಸಮುದ್ರ ಮೀನುಗಾರರ ಹಿತದೃಷ್ಟಿಯಿಂದ ಮತ್ತು ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು, ಹಿರಿಯ ಮೀನುಗಾರಿಕಾ ತಜ್ಞರು, ವಿಜ್ಞಾನಿಗಳೊಂದಿಗೆ ಚರ್ಚಿಸಿ ಸಮಗ್ರ ಮೀನುಗಾರಿಕಾ ನೀತಿಯನ್ನು ಜಾರಿಗೆ ತರಲು ಸರಕಾರ ಬದ್ಧವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News