ಅಲೆಮಾರಿಗೆ ಆಪದ್ಬಾಂಧವರಾದ ಉಪ್ಪಿನಂಗಡಿ ಯುವಕರು

Update: 2020-02-22 14:14 GMT

ಮಂಗಳೂರು, ಫೆ.22: ಉದ್ಯೋಗ ಅರಸಿ ತಮಿಳುನಾಡಿನಿಂದ ಬಂದು ಅಲೆಮಾರಿಯಾಗಿ ತಿರುಗುತ್ತಾ, ಊಟಕ್ಕೂ ಪರದಾಡುತ್ತಿದ್ದ ಯುವಕನಿಗೆ ಉಪ್ಪಿನಂಗಡಿಯ ಮುಸ್ಲಿಂ ಯುವಕರು ಶನಿವಾರ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಮಿಳುನಾಡಿನ ತಿರುಚ್ಚಿ ನಿವಾಸಿ ಅಲ್ಲಾಪಾಷ (38) ಅಲೆಮಾರಿ ಯುವಕ. ಸಂಕಷ್ಟದಲ್ಲಿದ್ದ ಯುವಕನಿಗೆ ಆಪದ್ಬಾಂಧವರಂತೆ ಬಂದ ಸಾಮಾಜಿಕ ಕಾರ್ಯಕರ್ತ ಇಮ್ರಾನ್, ಇರ್ಷಾದ್ ನೀರಕಟ್ಟೆ, ಆದಿಲ್ ಗಾಂಧೀಪಾರ್ಕ್, ಮುಬಶ್ಶೀರ್ ಉಪ್ಪಿನಂಗಡಿ, ಇರ್ಫಾನ್ ಪೊರ್ಕಳ ಅವರನ್ನೊಳಗೊಂಡ ತಂಡವು ಸ್ನಾನ ಮಾಡಿಸಿ, ಕ್ಷೌರ ಮಾಡಿಸಿ, ಊಟ, ಬಟ್ಟೆ, ಪ್ರಯಾಣದ ಟಿಕೆಟ್‌ಗೆ ಹಣ ನೀಡಿ ಕಳುಹಿಸಿಕೊಟ್ಟಿದೆ.

ಈ ಬಗ್ಗೆ ‘ವಾರ್ತಾಭಾರತಿ’ ಜತೆಗೆ ಮಾತನಾಡಿದ ಇರ್ಫಾನ್ ಪೊರ್ಕಳ, ‘ದೂರದ ತಮಿಳುನಾಡಿನ ತಿರುಚ್ಚಿಯಿಂದ ಉದ್ಯೋಗ ಅರಸಿ ರೈಲು ಹತ್ತಿದ್ದಾನೆ. ರೈಲು ಪ್ರಯಣದಲ್ಲೂ ಹಣವಿಲ್ಲದೆ ಸಂಚರಿಸಿದ್ದು, ಬಳಿಕ ರೈಲಿನಿಂದ ಮಂಗಳೂರು ಸಮೀಪ ಹೊರದಬ್ಬಲ್ಪಟ್ಟಿದ್ದಾನೆ. ಮಂಗಳೂರು ಪರಿಸರ ಅಲೆಮಾರಿಯಾಗಿ ತಿರುಗುತ್ತಾ ಉಪ್ಪಿನಂಗಡಿವರೆಗೂ ಬಂದಿದ್ದ. ಆತನ ಮೇಲೆ ಅನುಮಾನ ಬಂದು ವಿಚಾರಿಸಿದಾಗ ವಿಷಯ ತಿಳಿಯಿತು. ನದಿಯಲ್ಲಿ ಆತನಿಗೆ ಸ್ನಾ ಮಾಡಿಸಿದೆವು. ಕ್ಷೌರ ಮಾಡಿಸಿ, ಊಟ, ಬಟ್ಟೆ, ಪ್ರಯಾಣದ ಟಿಕೆಟ್‌ಗೆ ಹಣ ನೀಡಿ ಕಳುಹಿಸಿದೆವು. ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಇಂತಹ ಹಲವು ಅಲೆಮಾರಿಗಳು, ನಿರ್ಗತಿಕರಿಗೆ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News