ಅಸ್ಸಾಂ ಎನ್‌ಆರ್‌ಸಿ ದತ್ತಾಂಶ 10 ದಿನಗಳ ಬಳಿಕ ಮತ್ತೆ ಆನ್‌ಲೈನ್‌ನಲ್ಲಿ ಪ್ರತ್ಯಕ್ಷ

Update: 2020-02-22 15:08 GMT

ಗುವಾಹಟಿ, ಫೆ. 22: ಅಧಿಕೃತ ವೆಬ್‌ಸೈಟ್‌ನಿಂದ ಮಾಯವಾಗಿದ್ದ ಅಸ್ಸಾಮಿನ ಎನ್‌ಆರ್‌ಸಿ ದತ್ತಾಂಶ 10 ದಿನಗಳ ನಂತರ ಆನ್‌ಲೈನ್‌ನಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ದತ್ತಾಂಶ ಲಭ್ಯವಾಗತೊಡಗಿದೆ ಎಂದು ಎನ್‌ಆರ್‌ಸಿ ರಾಜ್ಯ ಸಮನ್ವಯಕಾರ ಹಿತೇಶ ದೇವ್ ಶರ್ಮಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಫೆ.12ರಿಂದ ಎನ್‌ಆರ್‌ಸಿ ಡಾಟಾ ಆನ್‌ಲೈನ್‌ನಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ತಮ್ಮ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಜನರಿಗೆ ಸಾಧ್ಯವಾಗುತ್ತಿರಲಿಲ್ಲ. ಮರುದಿನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶರ್ಮಾ,ಅಧಿಕೃತ ರಹಸ್ಯಗಳ ಕಾಯ್ದೆಯಡಿ ಮಾಜಿ ಎನ್‌ಆರ್‌ಸಿ ಯೋಜನಾ ನಿರ್ದೇಶಕರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲಾಗಿದೆ. ಅವರು ನ.11ರಂದು ರಾಜೀನಾಮೆ ಸಲ್ಲಿಸಿದ್ದರಾದರೂ ಎರಡು ಅಧಿಕೃತ ಇ-ಮೇಲ್ ಐಡಿಗಳ ಪಾಸ್‌ವರ್ಡ್‌ಗಳನ್ನು ತಿಳಿಸಿರಲಿಲ್ಲ. ಅವರಿಗೆ ಹಲವಾರು ಮೇಲ್‌ಗಳನ್ನು ರವಾನಿಸಿದ್ದರೂ ಉತ್ತರಿಸಿರಲಿಲ್ಲ ಎಂದು ತಿಳಿಸಿದ್ದರು.

ಆನ್‌ಲೈನ್‌ನಲ್ಲಿ ಎನ್‌ಆರ್‌ಸಿಯನ್ನು ನಿರ್ವಹಿಸುವ ಮತ್ತು ಕ್ಲೌಡ್ ಸ್ಟೋರೇಜ್ ಒದಗಿಸುವ ಗುತ್ತಿಗೆಯನ್ನು ತಂತ್ರಜ್ಞಾನ ಸಂಸ್ಥೆ ವಿಪ್ರೋಕ್ಕೆ ನೀಡಲಾಗಿತ್ತು. ಅಕ್ಟೋಬರ್ 2019ರಲ್ಲಿಯೇ ಗುತ್ತಿಗೆ ಮುಗಿದಿತ್ತಾದರೂ ಕಂಪನಿಯು ಸೌಹಾರ್ದದ ಸಂಕೇತವಾಗಿ ಯಾವುದೇ ಶುಲ್ಕವಿಲ್ಲದೆ ಡಾಟಾ ನಿರ್ವಹಣೆಯನ್ನು 2020 ಜನವರಿಯವರೆಗೆ ಮುಂದುವರಿಸಿತ್ತು.

ಎನ್‌ಆರ್‌ಸಿ ದತ್ತಾಂಶ ಆನ್‌ಲೈನ್‌ನಲ್ಲಿ ಅಲಭ್ಯವಾದ ಬಳಿಕ ಕಾಂಗ್ರೆಸ್ ಇದು ‘ನಿಗೂಢ ಮತ್ತು ದುರುದ್ದೇಶಪೂರ್ವಕ ಕೃತ್ಯ’ವಾಗಿದೆ ಎಂದು ಹೇಳಿದ್ದರೆ,ದತ್ತಾಂಶ ಸುರಕ್ಷಿತವಾಗಿದೆ ಮತ್ತು ಕ್ಲೌಡ್‌ನಲ್ಲಿ ಗೋಚರತೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಕೇಂದ್ರ ಗೃಹಸಚಿವಾಲಯವು ಸಮಜಾಯಿಷಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News