ಸುರತ್ಕಲ್: ಅಮೋನಿಯ ವಿಷಾನಿಲ ಸೋರಿಕೆ

Update: 2020-02-22 15:42 GMT

ಮಂಗಳೂರು, ಫೆ.22: ಸುರತ್ಕಲ್ ಕುಳಾಯಿ ಬಳಿಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಶನಿವಾರ ಭಾರೀ ಪ್ರಮಾಣದಲ್ಲಿ ಅಮೋನಿಯ ವಿಷಾನಿಲ ಸೋರಿಕೆಯಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಸಂಜೆ ವೇಳೆಗೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.

ಕುಳಾಯಿಯ ವಿಜಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಈ ಅವಘಡ ನಡೆದಿದಿದೆ. ಘಟಕದ ಅಮೋನಿಯ ಪೈಪ್ ಒಡೆದು ಏಕಾಏಕಿ ವಿಷಾನಿಲ ಸೋರಿಕೆಯಾಗಿ ಸ್ಥಳೀಯರಿಗೆ ಉಸಿರು ಕಟ್ಟಿದ, ಕಣ್ಣು ಉರಿಯ ಅನುಭವವಾಗಿತ್ತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಕದ್ರಿ ಮತ್ತು ಪಾಂಡೇಶ್ವರ ಠಾಣೆಯ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ನಿವಾಸಿಗಳನ್ನು ಮನೆಯಿಂದ ಹೊರಗೆ ದೂರದ ಪ್ರದೇಶಕ್ಕೆ ಕಳುಹಿಸಿ ರಕ್ಷಿಸಿದರು. ಬಳಿಕ ಉಸಿರಾಟದ ಸಲಕರಣೆಗಳು ಮತ್ತು ವಸ್ತ್ರ ಧರಿಸಿದ ಅಗ್ನಿಶಾಮಕ ಸಿಬ್ಬಂದಿ ಅಮೋನಿಯ ಸೋರಿಕೆಯ ವಾಲ್ವ್ ಬಂದ್ ಮಾಡುವಲ್ಲಿ ಯಶಸ್ವಿಯಾದರು. ಆದರೂ ಸೋರಿಕೆ ಆಗುತ್ತಲೇ ಇತ್ತು. ಸತತ ಕಾರ್ಯಾಚರಣೆ ಮೂಲಕ ಸಂಜೆ ವೇಳೆಗೆ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ.

ಮಂಜುಗಡ್ಡೆ ತಯಾರಿಕೆಗೆ ಬಳಸುವ ಅಮೋನಿಯ ಇದಾಗಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಅಮೋನಿಯ ಸೋರಿಕೆಯ ಪರಿಣಾಮ ಪರಿಸರದ ಮರಗಿಡಗಳ ಎಲೆಗಳು ಸುಟ್ಟುಹೋಗಿವೆ.

ರಾಜ್ಯ ಅಗ್ನಿ ಶಾಮಕ ದಳ, ಎಂಸಿಎಫ್ ಮತ್ತು ಎನ್‌ಎಂಪಿಟಿಯ ಅಗ್ನಿ ಶಾಮಕ ದಳಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮುಹಮ್ಮದ್ ನವಾಝ್ ಝುಲ್ಫೀಕರ್, ಕದ್ರಿ ಅಗ್ನಿಶಾಮಕ ಠಾಣೆಯ ಸ್ಟೇಶನ್ ಮಾಸ್ಟರ್ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News