ಭಾರತದಲ್ಲಿ ಮನೋವೈದ್ಯರ ಕೊರತೆ: ಡಾ.ಪಿ.ವಿ.ಭಂಡಾರಿ

Update: 2020-02-22 15:43 GMT

ಉಡುಪಿ, ಫೆ. 22: ಭಾರತದ ಜನಸಂಖ್ಯೆಗೆ ಅನುಗುಣವಾಗಿ ಇಂದು 36,000 ಮನೋ ವೈದ್ಯರು ಇರಬೇಕು. ಆದರೆ ಪ್ರಸ್ತುತ ಭಾರತದಲ್ಲಿ ಕೇವಲ 9000 ಮಂದಿ ಮಾತ್ರ ಮನೋವೈದ್ಯರಿದ್ದಾರೆ. ಇವರಲ್ಲಿ ಸುಮಾರು 6000ದಷ್ಟು ಮಂದಿ ವೈದ್ಯರು ಬೃಹತ್ ನಗರಗಳಿಗೆ ಸೀಮಿತರಾಗಿದ್ದಾರೆ. ಇಂಗ್ಲೆಂಡ್ ದೇಶದಲ್ಲಿರುವಂತೆ ಒಬ್ಬ ಮನೋ ವೈದ್ಯನಿಗೆ ರೋಗಿಗಳ ಸಂಖ್ಯೆಯನ್ನು ನಿಗದಿ ಪಡಿಸಿದರೆ ಭಾರತದಲ್ಲಿ ಈಗಿರುವ ವೈದ್ಯರಿಗಿಂತ 10ಪಟ್ಟು ಹೆಚ್ಚು ವೈದ್ಯರು ಇರಬೇಕಾಗುತ್ತದೆ ಎಂದು ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಉಡುಪಿಯ ಬಿಯಿಂಗ್ ಸೋಶಿಯಲ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಕೂತು ಮಾತನಾಡುವ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಮೆದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳಿಂದ ಮಾನಸಿಕ ಕಾಯಿಲೆ ಬರುತ್ತದೆಯೇ ಹೊರತು ಯಾವುದೇ ದೇವರ ಶಾಪ ಆಗಲಿ, ದೆವ್ವ ಗಳಿಂದ ಅಲ್ಲ. ಪ್ರತಿಯೊಂದು ಮಾನಸಿಕ ಕಾಯಿಲೆಗಳನ್ನು ನಿಯಂತ್ರಣ ಮಾಡಲು ವೈಜ್ಞಾನಿಕ ಚಿಕಿತ್ಸೆಯ ಅಗತ್ಯ ಇದೆ. ದೇವರ ಪೂಜೆಯಿಂದ ಈ ಕಾಯಿಲೆ ಗುಣ ಆಗುವುದಿಲ್ಲ ಎಂದು ಅವರು ಹೇಳಿದರು.

ಮಾನಸಿಕ ರೋಗಿಗಳು ಸಾಮಾನ್ಯರಂತೆಯೇ ಇರುತ್ತಾರೆ. ಅವರಿಗೆ ಇರುವ ಕಾಯಿಲೆಗಳನ್ನು ಕೆಲವೊಂದು ಲಕ್ಷಣಗಳಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗು ತ್ತದೆ. ಮಾನಸಿಕ ಕಾಯಿಲೆ ಬಗ್ಗೆ ಹಲವಾರು ಅಪನಂಬಿಕೆಗಳಿವೆ. ಶಿಕ್ಷಣಕ್ಕೂ ಮೂಢನಂಬಿಕೆಗೂ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ ಇಂದು ಶಿಕ್ಷಿತರೇ ಹೆಚ್ಚು ಮೂಢನಂಬಿಕೆಯನ್ನು ಅನುಸರಿಸುತ್ತಿದ್ದಾರೆ ಎಂದರು.

ಮಧುಮೇಹ, ರಕ್ತದೊತ್ತಡ ಇರುವ ಹಾಗೆ ಮಾನಸಿಕತೆ ಕೂಡ ಒಂದು ರೀತಿಯ ಕಾಯಿಲೆ ಆಗಿದೆ. ಆದರೆ ಜನ ಇನ್ನು ಕೂಡ ಆ ಕಾಯಿಲೆಯನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ. ವೈದ್ಯರ ಬಳಿ ಕದ್ದುಮುಚ್ಚಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ಮಾನಸಿಕ ಕಾಯಿಲೆಯ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಾಧಕರಾದ ಶ್ರೇಯಸ್ ಕೋಟ್ಯಾನ್, ಭಾವನಾ ಕೆರೆಮಠ, ಅಶ್ಲೇಷ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕ ವಿಶ್ವನಾಥ್ ಶೆಣೈ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ, ಪ್ರೊ. ಶಂಕರ್, ಶಿಲ್ಪಾ ಜೋಶಿ, ಸಂಧ್ಯಾ ಶೆಣೈ, ಮಧುಸೂದನ್ ಹೇರೂರು ಉಪಸ್ಥಿತರಿದ್ದರು. ಬಿಯಿಂಗ್ ಸೋಶಿಯಲ್‌ನ ಅವಿನಾಶ್ ಕಾಮತ್ ಸ್ವಾತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News