ಉಡುಪಿ: ಯೋಗ ಬಾಲಕಿ ತನುಶ್ರೀಯಿಂದ ಮತ್ತೊಂದು ವಿಶ್ವದಾಖಲೆ

Update: 2020-02-22 16:09 GMT

ಉಡುಪಿ, ಫೆ. 22: ಅತ್ಯಂತ ವೇಗದ 100 ಮೀಟರ್ ಚಕ್ರಾಸನ ಓಟದ ಮೂಲಕ ಉಡುಪಿಯ ಯೋಗಪಟು 11ರ ಹರೆಯದ ತನುಶ್ರೀ ಪಿತ್ರೋಡಿ ಮತ್ತೊಂದು ವಿಶ್ವದಾಖಲೆಯ ಸಾಧನೆಯನ್ನು ಮಾಡಿದ್ದಾರೆ.

ಈಗಾಗಲೇ ಯೋಗಾಸನದ ಮೂಲಕ ನಾಲ್ಕು ವಿಶ್ವ ದಾಖಲೆಗಳನ್ನು ಹೊಂದಿರುವ ಈಕೆ, ಇದೀಗ ಕೇವಲ 1 ನಿಮಿಷ 14 ಸೆಕೆಂಡ್ 48 ಮಿಲಿ ಸೆಕೆಂಡನಲ್ಲಿ ಈ ಓಟವನ್ನು ದಾಖಲೆ ಸಮಯದಲ್ಲಿ ಕ್ರಮಿಸುವುದರೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ವಿಶ್ವದಾಖಲೆಗೆ ಸೇರ್ಪಡೆ ಗೊಂಡಿದ್ದಾರೆ. ಈ ಹಿಂದೆ ಈ ದಾಖಲೆ (6 ನಿಮಿಷ ಅವಧಿ) ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಎಂಬವರ ಹೆಸರಿನಲ್ಲಿತ್ತು.

ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ಸ್ ಕ್ಲಬ್‌ನ ಸಹಕಾರದೊಂದಿಗೆ ಶನಿವಾರ ಉದ್ಯಾವರ ಗ್ರಾಪಂ ಮೈದಾನದಲ್ಲಿ ನಡೆದ ಈ ವಿಶ್ವದಾಖಲೆಯ ಪ್ರಯತ್ನದಲ್ಲಿ ಉಡುಪಿ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ತನುಶ್ರೀ ಈ ಸಾಧನೆ ಮಾಡಿದ್ದಾರೆ. ತನುಶ್ರೀಗೆ ದಾಖಲೆಯ ಪ್ರಮಾಣ ಪತ್ರವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಡಾ.ಮಹೇಶ್ ವೈಷ್ಣೋಯಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ತಾಪಂ ಸದಸ್ಯೆ ರಜನಿ ಅಂಚನ್, ಯೋಗಗುರು ರಾಮಕೃಷ್ಣ ಕೊಡಂಚ, ಶಾಲಾ ಶಿಕ್ಷಕಿ ಸಿಸ್ಟರ್ ಪ್ರೀತಿ, ಜಯಕರ ಶೆಟ್ಟಿ ಇಂದ್ರಾಳಿ, ವಿ.ಜೆ.ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್, ನಯನಾ ಗಣೇಶ್, ತನುಶ್ರೀ ಪಿತ್ರೋಡಿಯ ತಾಯಿ ಸಂಧ್ಯಾ, ತಂದೆ ಉದಯ ಕುಮಾರ್, ಸಹೋದರಿ ರಿತುಶ್ರೀ ಮೊದಲಾದವರು ಉಪಸ್ಥಿತರಿದ್ದರು. ಆರ್.ಜೆ ಎರೋಲ್ ಕಾರ್ಯಕ್ರಮ ನಿರೂಪಿಸಿದರು.

2017ರ ನ.11ರಂದು ನಿರಾಲಾಂಭ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ವಿಶ್ವ ದಾಖಲೆ, 2018ರ ಎ.7ರಂದು ಒಂದು ನಿಮಿಷಕ್ಕೆ 41 ಬಾರಿ ತನ್ನ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ತಿರುಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ, 2019ರಲ್ಲಿ ಮಾ.21ರಂದು ಇದೇ ಭಂಗಿಯಲ್ಲಿ ಒಂದು ನಿಮಿಷದಲ್ಲಿ 44 ಬಾರಿ ಮಾಡಿ ತನ್ನ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ಹಾಗೂ 2019ರ ಫೆ.23ರಂದು ಧನುರಾಸನ’ ಎಂಬ ಯೋಗಾಸನ ಭಂಗಿಯಲ್ಲಿ 1.40 ನಿಮಿಷದಲ್ಲಿ 96 ಬಾರಿ ಮುಂದೆ ಉರುಳುತ್ತ ಸಾಗುವ ಮೂಲ ವಿಶ್ವ ದಾಖಲೆಯನ್ನು ಮಾಡಿದ್ದರು.

ಅಭ್ಯಾಸ ಮಾಡುತ್ತಿದ್ದಾಗ 100 ಮೀಟರನ್ನು 1.40 ನಿಮಿಷದಲ್ಲಿ ಕ್ರಮಿಸುತ್ತಿದ್ದೆ. ಆದರೆ ಇಂದು ದಾಖಲೆ ಮಾಡುವಾಗ 1.14 ನಿಮಿಷದಲ್ಲಿ ತಲುಪಲು ಸಾಧ್ಯವಾಗಿದೆ. ಈ ಸಾಧನೆ ತುಂಬಾ ಸಂತೋಷ ತಂದಿದೆ. ಇದು ನನ್ನ 400ನೇ ಯೋಗ ಕಾರ್ಯಕ್ರಮವಾಗಿದೆ.

-ತನುಶ್ರೀ ಪಿತ್ರೋಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News