‘ಡೈಮಂಡ್ ಪ್ರಿನ್ಸೆಸ್’ ಹಡಗಿನಲ್ಲಿ ಉಳಿದಿರುವ ಭಾರತೀಯರಿಗೆ ಕೊರೋನ ಪರೀಕ್ಷೆ: ಭಾರತೀಯ ರಾಯಭಾರ ಕಚೇರಿ

Update: 2020-02-22 16:06 GMT

ಟೋಕಿಯೊ (ಜಪಾನ್), ಫೆ. 22: ಜಪಾನ್ ಕರಾವಳಿಯಲ್ಲಿ ಲಂಗರು ಹಾಕಿರುವ ಪ್ರವಾಸಿ ಹಡಗು ‘ಡೈಮಂಡ್ ಪ್ರಿನ್ಸೆಸ್’ನಲ್ಲಿ ಈಗಲೂ ಇರುವ ಭಾರತೀಯರಿಗೆ ಜಪಾನ್ ಅಧಿಕಾರಿಗಳು ನೂತನ-ಕೊರೋನವೈರಸ್ ಪರೀಕ್ಷೆ ನಡೆಸಲಿದ್ದಾರೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.

ಹಡಗಿನ ದಿಗ್ಬಂಧನ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ಎಲ್ಲ ಆರೋಗ್ಯವಂತ ಪ್ರಯಾಣಿಕರು ಹಡಗಿನಿಂದ ಇಳಿದು ಹೋಗಿದ್ದಾರೆ.

ಮಾರಕ ರೋಗದ ಲಕ್ಷಣಗಳನ್ನು ತೋರಿಸದ ಪ್ರಯಾಣಿಕರನ್ನು ಒಳಗೊಂಡ ಕೊನೆಯ ತಂಡವು ಹಡಗಿನಿಂದ ಶುಕ್ರವಾರ ಇಳಿಯಿತು.

ಇನ್ನೂ 1,000ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಹಡಗಿನಲ್ಲೇ ಉಳಿಯಲಿದ್ದಾರೆ ಎಂದು ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿಡೆ ಸುಗ ತಿಳಿಸಿದರು.

ಹಡಗು ಫೆಬ್ರವರಿ ಆದಿ ಭಾಗದಲ್ಲಿ ಯೊಕೊಹಾಮ ಬಂದರಿಗೆ ಬಂದಾಗ ಅದರಲ್ಲಿ 132 ಸಿಬ್ಬಂದಿ ಮತ್ತು 6 ಪ್ರಯಾಣಿಕರನ್ನು ಒಳಗೊಂಡ 138 ಭಾರತೀಯರಿದ್ದರು. ಹಡಗಿನಲ್ಲಿ ಒಟ್ಟು 3,711 ಮಂದಿಯಿದ್ದರು.

ಈವರೆಗೆ 8 ಭಾರತೀಯರಲ್ಲಿ ಕೊರೋನವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಅವರು ಜಪಾನ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News