ಫೆ.24ರಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ, ಸಂಕಲ್ಪ ಸಮಾವೇಶ
ಉಡುಪಿ, ಫೆ.22: ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಸಂಕಲ್ಪ ಸಮಾವೇಶ ಫೆ.24ರ ಸೋಮವಾರ ಸಂಜೆ 4 ಕ್ಕೆ ಕಿದಿಯೂರು ಹೋಟೆಲ್ ಶೇಷಶಯನ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿರ್ಗಮನ ಜಿಲ್ಲಾಧ್ಯಕ್ಷ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಗೌರವಿಸ ಲಾಗುವುದು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅಪರಾಹ್ನ 3:30ಕ್ಕೆ ಹಳೆ ಡಯಾನ ವೃತ್ತದಿಂದಸಭಾಂಗಣವರೆಗೆ ಮೆರವಣಿಗೆ ನಡೆಯಲಿದೆ ಎಂದವರು ತಿಳಿಸಿದರು.
ಪದಗ್ರಹಣ ಸಮಾರಂಭದಲ್ಲಿ ಪ್ರತೀ ಮತಗಟ್ಟೆಯಿಂದ 12 ಮಂದಿಯಂತೆ 12 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೂತ್ ಅಧ್ಯಕ್ಷ, ಶಕ್ತಿಕೇಂದ್ರ ಅಧ್ಯಕ್ಷ, ಮಹಾಶಕ್ತಿಕೇಂದ್ರ ಅಧ್ಯಕ್ಷ, ಮಂಡಲ ಅಧ್ಯಕ್ಷರಿಗೆ ಸಂಕಲ್ಪ ಬೋಧನೆ, ಗ್ರಾಪಂ ಚುನಾವಣೆ ತಯಾರಿ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಕಾಪು ಮಂಡಲ ಉಪಾಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ವಕ್ತಾರ ಶಿವಕುಮಾರ್, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಶ್ರೀಶನಾಯ್, ಪ್ರತಾಪ್ ಶೆಟ್ಟಿ ಉಪಸ್ಥಿತರಿದ್ದರು.