ಬರ್ಮಿಂಗ್‌ಹ್ಯಾಂ ವಿವಿಯೊಂದಿಗೆ ಮಾಹೆ ವಿವಿ ಒಪ್ಪಂದ
ಮಣಿಪಾಲ, ಫೆ.22: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಬ್ರಿಟನ್‌ನ ಬರ್ಮಿಂಗ್‌ಹ್ಯಾಂ ವಿವಿಯಲ್ಲಿ ವಿವಿಧ ವಿಭಾಗಗಳಲ್ಲಿ, ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಕಲಿಯಲು, ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುವ ಒಪ್ಪಂದ ಒಂದಕ್ಕೆ ಬರ್ಮಿಂಗ್‌ಹ್ಯಾಂ ವಿವಿಯ ಕುಲಪತಿ ಪ್ರೊ.ಸರ್ ಡೇವಿಡ್ ಈಸ್ಟ್‌ವುಡ್ ಹಾಗೂ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಹೊದಿಲ್ಲಿಯಲ್ಲಿ ಬುಧವಾರ ಸಹಿ ಹಾಕಿದರು.
ಒಪ್ಪಂದದಂತೆ ಮಣಿಪಾಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬರ್ಮಿಂಗ್‌ಹ್ಯಾಂ ವಿವಿಯಲ್ಲಿ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸಾಯನ್ಸ್ ಎಂಡ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ಸ್ ಎಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಿದೆ.
ಮಣಿಪಾಲದಲ್ಲಿ ಮೂರು ವರ್ಷ ಕಲಿತ ವಿದ್ಯಾರ್ಥಿ ಬರ್ಮಿಂಗ್‌ಹ್ಯಾಂನಲ್ಲಿ ತಮ್ಮ ಕಲಿಕೆಯನ್ನು ಮುಂದುವರಿಸಬಹುದಾಗಿದ್ದು, ಅವರ ಇಲ್ಲಿನ ಕ್ರೆಡಿಟ್ ಅಲ್ಲಿಗೂ ವರ್ಗಾವಣೆಗೊಳ್ಳಲಿದ್ದು, ಅಲ್ಲಿ ಅವರಿಗೆ ಮಾಸ್ಟರ್ಸ್ ಡಿಗ್ರಿ ಹಾಗೂ ಎರಡೂ ವಿವಿಗಳ ಪದವಿ ದೊರೆಯಲಿದೆ.
ಒಪ್ಪಂದ ಕುರಿತು ಮಾತನಾಡಿದ ಬರ್ಮಿಂಗ್‌ಹ್ಯಾಂ ವಿವಿ ಕುಲಪತಿ ಪ್ರೊ.ಸರ್ ಡೇವಿಡ್ ಈಸ್ಟ್‌ವುಡ್, ತಮ್ಮ ವಿವಿ ಭಾರತೀಯ ಸಂಗಾತಿ ಯೊಂದಿಗೆ ಸಂಶೋಧನೆಯಲ್ಲೂ ಜೊತೆಯಾಗಲಿದ್ದೇವೆ. ಪ್ರಸ್ತುತ ನಾವು ಅತ್ಯುನ್ನತ್ತ ಗುಣಮಟ್ಟದ 40 ಜಂಟಿ ಸಂಶೋಧನೆಗಳಲ್ಲಿ ಭಾಗೀದಾರರಾಗಿದ್ದೇವೆ ಎಂದರು.
ಬರ್ಮಿಂಗ್‌ಹ್ಯಾಂ ವಿವಿ, ವಿಶ್ವದ ಅಗ್ರಗಣ್ಯ 100 ವಿವಿಗಳಲ್ಲಿ ಸ್ಥಾನ ಪಡೆದಿದೆ. ಇಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ, ಸಂಶೋಧನೆಗಾಗಿ ಬರುತಿದ್ದಾರೆ. ಈಗ ವಿಶ್ವದ 150ಕ್ಕೂ ಅಧಿಕ ದೇಶಗಳ 6,500ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತಿದ್ದಾರೆ.
ಭಾರತದಲ್ಲಿ ಯುಜಿಸಿಯಿಂದ ‘ಇನ್‌ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್’ ಎಂದು ಗುರುತಿಸಿಕೊಂಡಿರುವ ಮಾಹೆ, ವೃತ್ತಿಪರ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲೇ ಉನ್ನತ ಸ್ಥಾನವನ್ನು ಪಡೆದಿದೆ.