ರಾಷ್ಟ್ರೀಯತೆ, 'ಭಾರತ್ ಮಾತಾ ಕಿ ಜೈ' ದುರ್ಬಳಕೆ ಆಗುತ್ತಿದೆ: ಮನಮೋಹನ್ ಸಿಂಗ್

Update: 2020-02-22 16:15 GMT

ಹೊಸದಿಲ್ಲಿ, ಫೆ. 22: ರಾಷ್ಟ್ರೀಯತೆ ಹಾಗೂ 'ಭಾರತ್ ಮಾತಾ ಕಿ ಜೈ' ಘೋಷಣೆಯನ್ನು ಭಾರತದ 'ಸಂಪೂರ್ಣ ಭಾವನಾತ್ಮಕ ಹಾಗೂ ಉಗ್ರ' ಚಿಂತನೆಯನ್ನು ಕಟ್ಟಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.

ಜವಾಹರ್‌ಲಾಲ್ ನೆಹರೂ ಪುಸ್ತಕಗಳು ಹಾಗೂ ಭಾಷಣಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತವನ್ನು ಒಂದು ವಿಭಿನ್ನ ಪ್ರಜಾಪ್ರಭುತ್ವ ಎಂದು ಪರಿಗಣಿಸಲು, ಭಾರತದ ಜಗತ್ತಿನ ಒಂದು ಪ್ರಮುಖ ದೇಶ ಎಂದು ಪರಿಗಣಿಸಲು ಮೂಲ ಕಾರಣ ಈ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಎಂದರು.

  ಭಾರತದ ಮೊದಲ ಪ್ರಧಾನಿಯಾದ ಜವಾಹರ್‌ಲಾಲ್ ನೆಹರೂ ಭಾರತದ ಪರಂಪರೆ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ಅದನ್ನು ಸಂಘಟಿಸಲು, ಹಾಗೂ ಅದನ್ನು ಆಧುನಿಕ ಭಾರತಕ್ಕೆ ಅನುಗುಣವಾಗಿ ಸಮನ್ವಯಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ಅವರು ಹೇಳಿದರು.

 ಹಲವು ಭಾಷೆಗಳನ್ನು ಅರಿತಿದ್ದ ನೆಹರೂ ಅವರು ಆಧುನಿಕ ಭಾರತದ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳಿಗೆ ಅಸ್ತಿವಾರ ಹಾಕಿದರು. ನೆಹರೂ ಅವರದ್ದೇ ನಾಯಕತ್ವ ಇದ್ದಿದ್ದರೆ, ಭಾರತಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ತಿಳಿಸಿದರು.

 ದುರಾದೃಷ್ಟವೆಂದರೆ, ಒಂದು ವರ್ಗದ ಜನರಿಗೆ ಇತಿಹಾಸ ಓದುವ ತಾಳ್ಮೆ ಇಲ್ಲ. ಅವರು ತಮ್ಮ ಪೂರ್ವಾಗ್ರಹಗಳಿಂದ ಉದ್ದೇಶಪೂರ್ವಕವಾಗಿ ಮಾರ್ಗದರ್ಶನಕ್ಕೆ ಒಳಗಾಗುವುದನ್ನು, ನೆಹರೂ ಅವರನ್ನು ತಪ್ಪಾಗಿ ಬಿಂಬಿಸುವುದನ್ನೇ ಬಯಸುತ್ತಿದ್ದಾರೆ. ಆದರೆ, ನಕಲಿ ಹಾಗೂ ಸುಳ್ಳು ಪ್ರಚೋದನೆಗಳನ್ನು ತಿರಸ್ಕರಿಸುವ ಹಾಗೂ ಎಲ್ಲವನ್ನೂ ಸರಿಯಾದ ದೃಷ್ಟಿಕೋನದಲ್ಲಿ ನೋಡುವ ಸಾಮರ್ಥ್ಯ ಇತಿಹಾಸಕ್ಕೆ ಇದೆ ಎಂಬ ಖಾತ್ರಿ ನನಗಿದೆ ಮನಮೋಹನ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News