ದಕ್ಷಿಣ ಕೊರಿಯ: 229 ಹೊಸ ಕೊರೋನ ಸೋಂಕು ಪ್ರಕರಣ
Update: 2020-02-22 21:47 IST
ಸಿಯೋಲ್ (ದಕ್ಷಿಣ ಕೊರಿಯ), ಫೆ. 22: ದಕ್ಷಿಣ ಕೊರಿಯದಲ್ಲಿ ಶನಿವಾರ 229 ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಒಂದು ದಿನದಲ್ಲಿ ವರದಿಯಾದ ಈವರೆಗಿನ ಅತ್ಯಧಿಕ ಸೋಂಕು ಪ್ರಕರಣಗಳಾಗಿವೆ.
ಇದರೊಂದಿಗೆ ದಕ್ಷಿಣ ಕೊರಿಯದಾದ್ಯಂತ ದೃಢಪಟ್ಟಿರುವ ಕೊರೋನವೈರಸ್ ಸೋಂಕು ಪ್ರಕರಣ 433ಕ್ಕೆ ಏರಿದೆ.
ಹೊಸದಾಗಿ ವರದಿಯಾಗಿರುವ ಪ್ರಕರಣಗಳ ಪೈಕಿ 95 ಚೆವಂಗ್ಡೊ ಡೇನಮ್ ಆಸ್ಪತ್ರೆಯ ರೋಗಿಗಳು ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಕೊರಿಯ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ.
ಈ ನಡುವೆ, ಕೊರೋನವೈರಸ್‌ನಿಂದಾಗಿ ಇನ್ನೊಂದು ಸಾವು ಸಂಭವಿಸಿದೆ ಎಂದು ದಕ್ಷಿಣ ಕೊರಿಯ ಶನಿವಾರ ಘೋಷಿಸಿದೆ. ಇದರೊಂದಿಗೆ ದೇಶದಲ್ಲಿ ಈ ಭೀಕರ ರೋಗದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ.