ಕರಾವಳಿ ಅಭಿವೃದ್ಧಿ ‘ಪ್ರಾಧಿಕಾರ’ದ ಬದಲು ‘ನಿಗಮ’ ಪ್ರಸ್ತಾವನೆ: ಮಟ್ಟಾರು ರತ್ನಾಕರ ಹೆಗ್ಡೆ
ಮಂಗಳೂರು, ಫೆ. 22: ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃಧಿ ನಿಗಮವಾಗಿ ಪರಿವರ್ತಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಪ್ರಾಧಿಕಾರದ ನೂತನ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ನಗರದ ಲಾಲ್‌ಬಾಗ್‌ನಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಸರಕಾರದ ಯೋಜನಾ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದು, ಮುಂದಿನ ಸಭೆಯಲ್ಲಿ ಮುಖ್ಯಮಂತ್ರಿಯ ಗಮನಕ್ಕೆ ತರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬದಲು ನಿಗಮವಾದರೆ ಕರಾವಳಿಗೆ ಹೆಚ್ಚಿನ ಲಾಭವಿದೆ. ಅಧಿಕ ಅನುದಾನ, ಸಿಬ್ಬಂದಿ ವರ್ಗದ ಸಂಖ್ಯೆ ಹೆಚ್ಚಳ, ಏಜೆನ್ಸಿಗಳ ಬದಲು ನೇರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಅವಕಾಶ ದೊರೆಯಲಿದೆ ಎಂದರು.
ಇಂದಿನ ವ್ಯವಸ್ಥೆಯಲ್ಲಿ ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಏಜೆನ್ಸಿಗಳ ಮೂಲಕ ಪ್ರಾಧಿಕಾರದ ಕೆಲಸ ನಡೆಯುತ್ತಿದೆ. ನಿಗಮವಾಗಿ ಪರಿವರ್ತಿಸುವುದರಿಂದ ತಮ್ಮದೇ ಇಂಜಿನಿಯರ್‌ಗಳ ಸಹಿತ ಪ್ರತ್ಯೇಕ ವ್ಯವಸ್ಥೆ ಲಭ್ಯವಾಗಲಿದೆ. ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ವೇಗ ದೊರೆಯಲಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಸಾಗರ ಕೈಗಾರಿಕೆ ವಲಯ ಸ್ಥಾಪನೆ ಪ್ರಯತ್ನ ನಡೆಯುತ್ತಿದೆ. ಮೀನುಗಾರಿಕೆ ಲಾಭದಾಯಕ ವ್ಯವಸ್ಥೆ ಯಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಎಲ್ಲವನ್ನೂ ಒಂದೇ ಕಡೆ ಒದಗಿಸಿದರೆ ರಫ್ತು ಚಟುವಟಿಕೆಗಳಿಗೆ ಉತ್ತೇಜನ ವಾಗಲಿದೆ. ಪ್ರಸ್ತಾವಿತ ಯೋಜನೆಯು ಪರಿಶೀಲನೆ ಹಂತದಲ್ಲಿದ್ದು, ಇನ್ನೂ ಅಂತಿಮ ಸ್ವರೂಪ ಸಿಕ್ಕಿಲ್ಲ. ಕರಾವಳಿ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಕೇಂದ್ರ ಸ್ಥಾನವಾಗಿ ಇಟ್ಟುಕೊಂಡು ಕಾರ್ಯಾಚರಣೆ ಆರಂಭಿಸುವುದರ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದರು.
ಮಂಗಳೂರುನಿಂದ ಕಾರವಾರ ತನಕ 1,000 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಮೀನುಗಾರಿಕೆ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ದೊಡ್ಡ ಮೊತ್ತದ ಅನುದಾನ ಈ ಯೋಜನೆಗೆ ಆವಶ್ಯವಿರುವ ಕಾರಣ ಹಂತಹಂತವಾಗಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದ ಹೆಗ್ಡೆ ಪ್ರಾಧಿಕಾರಕ್ಕೆ 100 ಕೋ.ರೂ. ಅನುದಾನದ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದಿಡಲಾಗಿದೆ. ಪ್ರಾಧಿಕಾರದ ಯೋಜನೆಗಳಲ್ಲಿ ಶೇ.10 ನಿಧಿಯನ್ನು ನಿಯಮ ಪ್ರಕಾರ ಸ್ಥಳೀಯಾಡಳಿತ ಒದಗಿಸಬೇಕು. ಆದರೆ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿ ನಿಧಿಯ ಕೊರತೆ ಇರುವುದ ರಿಂದ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಹಾಗಾಗಿ ಇಂತಹ ಕಾಮಗಾರಿಗಳಿಗೆ ಸರಕಾರದಿಂದಲೇ ಪೂರ್ಣ ಅನುದಾನ ಒದಗಿಸುವಂತೆ ಕೋರಲಾಗಿದೆ ಎಂದರು.
ಕಾಪು ದೀಪ ಸ್ತಂಭವನ್ನು ಪ್ರವಾಸಿಗರ ಕೇಂದ್ರವಾಗಿ ರೂಪಿಸಲು ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಬಂಗ್ರ ಕೂಳೂರು ಪ್ರದೇಶವನ್ನು ಕೂಡ ಪ್ರವಾಸಿ ಸ್ಥಳವಾಗಿ ಬೆಳೆಸಲು ಇರುವ ಅವಕಾಶಗಳ ಪರಿಶೀಲನೆ ನಡೆಸಲಾಗುವುದು ಎಂದು ಹೆಗ್ಡೆ ಹೇಳಿದರು.
ವೈಜ್ಞಾನಿಕ ವರದಿ ಸಲ್ಲಿಸಲು ನಳಿನ್ ಸೂಚನೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಕರಾವಳಿಯ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಶಾಶ್ವತ ಅಭಿವೃಧ್ಧಿಗೆ ಪೂರಕ ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸಭೆಯ ಅಧ್ಯಕ್ಷತೆ ವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.
ವರದಿಯಲ್ಲಿ ಉದ್ಯಮಶೀಲತೆ, ಕೃಷಿ ಆಧಾರಿತ ಚಟುವಟಿಕೆ, ಮಿನುಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಧಾರ್ಮಿಕ ಟೂರಿಸಂ, ಬೀಚ್ ಟೂರಿಸಂ ಹಾಗೂ ಪಶ್ಚಿಮ ಘಟ್ಟ ಒಳಗೊಂಡಿರುವ ಅರಣ್ಯ ಕೇಂದ್ರೀಕೃತ ಟೂರಿಸಂಗೆ ಜಿಲ್ಲೆಯಲ್ಲಿ ವಿಪುಲ ಅವಕಾಶವಿದ್ದು, ಅದನ್ನು ಬಳಸಿಕೊಳ್ಳುವುದು ಆವಶ್ಯ ಎಂದು ನಳಿನ್ ಹೇಳಿದರು.
ಕರಾವಳಿ ಪ್ರಾಧಿಕಾರದಿಂದ ಯೋಜನೆಗಳನ್ನು ಸಿದ್ಧಪಡಿಸುವಾಗ ಮತ್ತು ಜಾರಿಗೊಳಿಸುವಾಗ ಕರಾವಳಿಯ ಪರಿಸರ ಮತ್ತು ಧಾರಣಾ ಸಾಮರ್ಥ್ಯದ ಬಗ್ಗೆ ಎಚ್ಚರ ವಹಿಸಬೇಕು. ಪರಿಸರಕ್ಕೆ ಧಕ್ಕೆಯಾಗ ರೀತಿಯ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ನಳಿನ್ ತಿಳಿಸಿದರು.
ಸಭೆಯಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್, ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಧ್ಯಕ್ಷ ಯಶಪಾಲ ಸುವರ್ಣ, ಮನಪಾ ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಬಿಜೆಪಿಯ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.