ರಾಜ್ಯದ 25 ದೇವಸ್ಥಾನಗಳಲ್ಲಿ ಗೋಶಾಲೆ ತೆರೆಯಲು ಯೋಜನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-02-23 14:17 GMT

ಉಡುಪಿ, ಫೆ.23: ರಾಜ್ಯದ ಪ್ರಮುಖ ಆಯ್ದ 25 ದೇವಸ್ಥಾನಗಳಲ್ಲಿ ಗೋಶಾಲೆಯನ್ನು ತೆರೆಯಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದರ ಜವಾಬ್ದಾರಿಯನ್ನು ಆಡಳಿತ ಮಂಡಳಿ ಸಹಕಾರ ಅಗತ್ಯ ಇದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಉಡುಪಿ ಅಜ್ಜರಕಾಡು ಪುರಭವನದಲ್ಲಿ ರವಿವಾರ ಆಯೋಜಿಸಲಾದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹಿಂದು ಧರ್ಮದ ಗಟ್ಟಿತನ, ಶಕ್ತಿ ತುಂಬುವ ಮತ್ತು ಆ ಮೂಲಕ ಸಮಾಜ ವನ್ನು ಕಟ್ಟುವ ಕೆಲಸ ಮಾಡುವುದಕ್ಕಾಗಿ ಮುಂದಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಅನೇಕ ಬದಲಾವಣೆ ಮಾಡಬೇಕಾಗಿದೆ. ಯುವ ಜನತೆಯಲ್ಲಿ ಉತ್ತಮ ಸಂಸ್ಕಾರ ಕಲಿಸುವ ಮತ್ತು ನಮ್ಮ ಸಂಸ್ಕೃತಿಯನ್ನು ಬೆಳೆಸುವ ಗುರುತರ ಜವಾಬ್ದಾರಿ ದೇವಾಲಯಗಳ ಮೇಲಿದೆ ಎಂದರು.

ರಾಜ್ಯದ 100 ದೇವಾಲಯಗಳಲ್ಲಿ ಪ್ರಥಮ ಹಂತದಲ್ಲಿ ಎ.26ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎ ದರ್ಜೆ ದೇವಾ ಲಯಗಳು ಇಲ್ಲದ ಸ್ಥಳದಲ್ಲಿ ಬಿ ಮತ್ತು ಸಿ ದರ್ಜೆಯ ದೇವಾಲಯ ಗಳಲ್ಲಿ ವಿವಾಹ ಏರ್ಪಡಿಸಲು ಸೂಚಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ 30 ಜಿಲ್ಲೆಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.

ಸರಳ ವಿವಾಹದಲ್ಲಿ ಮದುವೆಯಾಗುವ ವಧುವಿಗೆ ಬಟ್ಟೆ ಖರೀದಿಸಲು 10,000ರೂ. ಮತ್ತು ವರನಿಗೆ 5000ರೂ. ಹಾಗೂ 40,000ರೂ. ವೆಚ್ಚದಲ್ಲಿ ಚಿನ್ನದ ಮಾಂಗಲ್ಯ ಸರ ನೀಡಲಾಗುವುದು. ಅಲ್ಲದೆ ಕಂದಾಯ ಇಲಾಖೆಯಲ್ಲಿ ಆದರ್ಶ ವಿವಾಹ ಯೋಜನೆಯಡಿ 10,000ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ವಧು ವರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50,000 ರೂ. ದೊೆಯಲಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಮಹರ್ಷಿ ಆನಂದ ಗುರೂಜಿ ಉಪನ್ಯಾಸ ನೀಡಿ, ವಿವಾಹ ಎಂಬುದು ಎರಡು ಸಂಬಂಧಗಳನ್ನು ಬೆಸೆಯುವ ಪವಿತ್ರ ಕಾರ್ಯ. ಆರ್ಥಿಕ ಅಡಚಣೆಯಿಂದ ತಮ್ಮ ಮಕ್ಕಳ ವಿವಾಹ ಮಾಡಲು ಸಾಲದ ಸುಳಿಯಲ್ಲಿ ಸಿಲುಕಬೇಕಾದ ಹಾಗೂ ಈವರೆಗೆ ಮದುವೆ ಮಾಡಲು ಸಾಧ್ಯವಾಗದೆ, ವಿವಾಹವನ್ನು ಮುಂದೂಡುವ ಹಲವು ಪೋಷಕರಿಗೆ ಈ ಸರಳ ವಿವಾಹ ಯೋಜನೆ ನೆರವಾಗಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಸರಳ ವಿವಾಹ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ರಘುಪತಿ ಭಟ್ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಸಿದ್ದಲಿಂಗ ಪ್ರಭು, ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ಎಂ.ರವಿಕುಮಾರ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು, ಪ್ರಶಾಂತ್ ಹಾವಂಜೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News