ಪರ್ಕಳ ರಾ.ಹೆ. ಕಾಮಗಾರಿ ಪೂರ್ಣಕ್ಕೆ ಭೂಸಂತ್ರಸ್ತರ ಸಹಕಾರ ಅಗತ್ಯ: ರಘುಪತಿ ಭಟ್

Update: 2020-02-23 14:19 GMT

ಉಡುಪಿ, ಫೆ.23: ಪರ್ಕಳ ಮತ್ತು ಕಡಿಯಾಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪರ್ಕಳ ಪೇಟೆಯಿಂದ ಈಶ್ವರನಗರದವರೆಗೆ ಮಾತ್ರ ಬಾಕಿ ಉಳಿದಿದ್ದು, ಮಳೆಗಾಲದ ಆರಂಭವಾಗುವ ಮೊದಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾದರೆ ಭೂಸಂತ್ರಸ್ತರು ಭೂ ಸ್ವಾಧೀನ ಪ್ರಕ್ರಿಯೆ ನಡೆಯುವ ಸಂದರ್ಭ ಕಾಮಗಾರಿ ನಡೆಸಲು ಅನುಮತಿ ನೀಡಿ ಸಹಕರಿಸಬೇಕೆಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಪರ್ಕಳ ಬಿಎಂ ಶಾಲೆಯ ವಠಾರದಲ್ಲಿ ಶನಿವಾರ ಪರ್ಕಳ ರಾಷ್ಟ್ರೀಯ ಹೆದ್ದಾರಿ ಭೂಸಂತ್ರಸ್ತರ ಜೊತೆ ಭೂಸ್ವಾಧೀನ ಮತ್ತು ಅದರ ಪರಿಹಾರ ಪ್ರಕ್ರಿಯೆ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಇಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಕಾರಣ ಮತ್ತು ರಸ್ತೆ ಹಾದು ಹೋಗುವ ಸ್ಥಳದ ಕುರಿತ ಗೊಂದಲದಿಂದ ಸುಮಾರು ಆರು ತಿಂಗಳು ವಿಳಂಬವಾ ಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳ ನಡುವೆ ಸಾಕಷ್ಟು ಸಂವಹನ ನಡೆಸಿದ ಬಳಿಕ ರಸ್ತೆಯು ಗಜೆಟ್ ನೋಟಿಫಿಕೇಶನ್ನಂತೆಯೇ ಹಾದು ಹೋಗಲಿದ್ದು ಭೂಸ್ವಾದೀನ ಪ್ರಕ್ರಿಯೆಯು ಅದಕ್ಕೆ ಪೂರಕವಾಗಿ ನಡೆಯಲಿದೆ. ಈಗಾಗಲೇ ಈ ಪ್ರಕ್ರಿಯೆಯು ಸುಮಾರು ಎರಡು ತಿಂಗಳಷ್ಟು ಕಾಲ ನಡೆಯಲಿರುವುದರಿಂದ ಅಲ್ಲಿ ಕಾಮಗಾರಿ ನಡೆಸಲು ವಿಳಂಬವಾಗುತ್ತದೆ. ಮತ್ತೆ ಮಳೆಗಾಲದ ಕಾರಣ 8 ತಿಂಗಳ ಕಾಲ ಕಾಮಗಾರಿ ನೆಲೆಸಲು ಅಸಾಧ್ಯವಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಭೂಸಂತ್ರಸ್ತರು ತಾವು ಕಳೆದು ಕೊಳ್ಳುವ ಭೂಮಿಯ ವಿಸ್ತೀರ್ಣ, ಅದರ ಮೌಲ್ಯ ಇತ್ಯಾದಿಗಳ ನಿಖರ ಮಾಹಿತಿ ತಮಗೆ ದೊರಕಿದಾಗ ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆಯ ಈ ಹಂತವು ಇನ್ನು ಒಂದು ವಾರದಲ್ಲಿ ಬರಲಿದ್ದು ಅದರಲ್ಲಿ ಸಂಪೂರ್ಣ ಮಾಹಿತಿಗಳು ಲಭ್ಯವಿರುತ್ತದೆ. ಆ ನಂತರದ ಹಂತಗಳು ಕೇವಲ ಆಡಳಿತಾತ್ಮಕವಾಗಿ ನಡೆಯಲಿದ್ದು, ವೇಗವಾಗಿ ಪೂರ್ಣಗೊಂಡು ಒಟ್ಟಾರೆಯಾಗಿ ಮೂರು ತಿಂಗಳೊಳಗೆ ಎಲ್ಲ ಪ್ರಕ್ರಿಯೆಗಳು ಮುಗಿದು ಪರಿಹಾರ ಸಂತ್ರಸ್ತರ ಕೈ ಸೇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಭರವಸೆ ನೀಡಿದರು.

ಈ ಹಂತದ ವರದಿಗಳು ಕೈ ಸೇರಿದ ನಂತರ ಮತ್ತೊಮ್ಮೆ ಸಭೆ ನಡೆಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು. ಭೂ ಸ್ವಾಧೀನ ಪ್ರಕ್ರಿಯೆಯ ಅಡಚಣೆ ಇಲ್ಲದ ಪ್ರದೇಶಗಳಲ್ಲಿ ಈಗಿರುವ ರಸ್ತೆಯನ್ನೇ ಅಗಲೀಕರಿಸಿ ಕಾಮಗಾರಿ ಪೂರ್ಣ ಗೊಳಿಸಲಾಗಿದೆ. ಆದರೆ ಪರ್ಕಳದಲ್ಲಿ ಈಗಿರುವ ರಸ್ತೆ ಯಲ್ಲಿಯೇ ಕಾಮಗಾರಿ ಮುಂದುವರಿಸಲು ಪ್ರಯತ್ನ ನಡೆಸಿದರೂ ಭೂಸ್ವಾಧೀನ ಪ್ರಕ್ರಿಯೆ ಇರುವುದ ರಿಂದ ಪ್ರಸ್ತಾವಿತ ಗಜೆಟ್ ನೋಟಿಫಿಕೇಷನ್ ಪ್ರಕಾರವೇ ರಸ್ತೆ ಕಾಮಗಾರಿ ನಡೆಸುವುದು ಅನಿವಾರ್ಯವಾಗಿದೆ ಎಂದು ಶಾಸಕರು ಹೇಳಿದರು.

ಸಭೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ, ನಗರಸಭಾ ಸದಸ್ಯರಾದ ಸುಮಿತ್ರಾ ಆರ್.ನಾಯಕ್, ಮಂಜುನಾಥ್ ಮಣಿಪಾಲ, ವಿಜಯಲಕ್ಷ್ಮೀ, ಹೆದ್ದಾರಿ ಪ್ರಾಧಿಕಾರದ ಇಂಜಿನಿಯರುಗಳಾದ ನಾಗರಾಜ್ ನಾಯಕ್, ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News