ಬಡವ-ಶ್ರೀಮಂತ ಭೇದವಿಲ್ಲದೆ ‘ಸಪ್ತಪದಿ’ಯೋಜನೆ: ಸಚಿವ ಕೋಟ

Update: 2020-02-23 14:30 GMT

ಮಂಗಳೂರು, ಫೆ.23: ಸಾಮೂಹಿಕ ಸರಳ ವಿವಾಹ ‘ಸಪ್ತಪದಿ’ಯು ಬಡವರನ್ನು ಗುರಿಯಾಗಿರಿಸಿ ಸರಕಾರ ರೂಪಿಸಿರುವ ಕಾರ್ಯಕ್ರಮ ವಾದರೂ ಕೂಡಿದು ಬಡವರಿಗೆ ಮಾತ್ರ ಸೀಮಿತವಾಗಿಲ್ಲ. ಶ್ರೀಮಂತರು ಕೂಡ ಈ ಯೋಜನೆಯಡಿ ಸರಳ ವಿವಾಹವಾಗುವ ಮೂಲಕ ಸಮಾಜಕ್ಕೆ ಆದರ್ಶವಾಗಲು ಅವಕಾಶವಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದ.ಕ. ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ನಡೆಯಲಿರುವ ‘ಸಪ್ತಪದಿ’ ಸಾಮೂಹಿಕ ವಿವಾಹ ಹಿನ್ನೆಲೆಯಲ್ಲಿ ರವಿವಾರ ನಗರದ ಪುರಭವನದಲ್ಲಿ ಜರಗಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲು ರಾಜ್ಯದ ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಮಾತ್ರ ವಿವಾಹ ಆಯೋಜನೆಗೆ ನಿರ್ಧಾರವಾಗಿತ್ತು. ಆದರೆ ಬಿಜಾಪುರ, ಬೀದರ್, ರಾಯಚೂರು ಮೊದಲಾದ ಕೆಲವು ಜಿಲ್ಲೆಗಳಲ್ಲಿ ‘ಎ’ ದರ್ಜೆಯ ದೇವಸ್ಥಾನಗಳು ಇಲ್ಲದಿರುವುದರಿಂದ ಅಲ್ಲಿನ ‘ಬಿ’ ಮತ್ತು ‘ಸಿ’ ದರ್ಜೆಯ ದೇವಸ್ಥಾನಗಳಲ್ಲಿಯೂ ಸಾಮೂಹಿಕ ಸರಳ ವಿವಾಹ ಮಾಡಲು ಅವಕಾಶ ನೀಡಲಾಗಿದೆ. ಕುಟುಂಬದ ವಿವಾಹವನ್ನು ಮಾಡುವ ರೀತಿಯಲ್ಲಿಯೇ ಯೋಜನಾಬದ್ಧವಾಗಿ, ಭಾವನಾತ್ಮಕವಾಗಿ, ಅರ್ಥಪೂರ್ಣವಾಗಿ ಸಾಮೂಹಿಕ ವಿವಾಹ ಕೂಡ ಮಾಡಲು ಸೂಚನೆ ನೀಡಲಾಗಿದೆ. ಎಲ್ಲರನ್ನು ಸೇರಿಸಿ ಕಾರ್ಯಕ್ರಮ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮಠಾಧಿಪತಿಗಳು, ಸಾಧು-ಸಂತರು, ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

*ವಧುವಿನ ಖಾತೆಗೆ 10,000 ರೂ.

ಸರಳ ವಿವಾಹವಾಗುವ ವರನಿಗೆ 5,000 ರೂ. ಹಾಗೂ ವಧುವಿಗೆ 10,000 ರೂ ಮತ್ತು ವಧುವಿಗೆ 40,000 ರೂ. ವೌಲ್ಯದ ಚಿನ್ನದ ತಾಳಿ, ಎರಡು ಚಿನ್ನದ ಗುಂಡುಗಳನ್ನು ನೀಡಲಾಗುವುದು. ಅಲ್ಲದೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ವಧುವಿಗೆ 10,000 ರೂ. ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುವುದು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ 50,000 ರೂ. ಒದಗಿಸಲಾಗುವುದು ಎಂದು ಸಚಿವರು ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ‘ಧಾರ್ಮಿಕ ದತ್ತಿ ಇಲಾಖೆ ಜೆಡ್ಡು ಕಟ್ಟಿದ ಇಲಾಖೆಯಾಗಿತ್ತು. ದೇವರ ಅನುಗ್ರಹ ಪಡೆಯಬೇಕಾಗಿದ್ದ ಇಲಾಖೆ ಅಧಿಕಾರಿಗಳ ಕೈಯೊಳಗೆ ಇರುವ ಇಲಾಖೆಯಾಗಿ ಪರಿವರ್ತನೆಯಾಗಿತ್ತು. ದೇವಸ್ಥಾನಗಳ ಹಣವನ್ನು ಸರಕಾರಗಳು ಲೂಟಿ ಮಾಡುತ್ತಿದ್ದವು. ಡಾ.ವಿ.ಎಸ್. ಆಚಾರ್ಯ ಧಾರ್ಮಿಕ ಪರಿಷತ್ ಮೂಲಕ ಸಾಮಾನ್ಯ ದೇವಸ್ಥಾನಗಳಿಗೂ ಅನುದಾನ ಕೊಡುವ ನಿಯಮ ತಂದು ಮೊದಲ ಪರಿವರ್ತನೆ ಮಾಡಿದರು. ಶ್ರೀನಿವಾಸ ಪೂಜಾರಿ ದೈವಸ್ಥಾನಗಳಿಗೂ ಅನುದಾನ ದೊರೆಯುವಂತೆ ಮಾಡಿದ್ದಾರೆ. ಇದೀಗ ಸರಳ ಸಾಮೂಹಿಕ ವಿವಾಹದ ಮೂಲಕ ಮತ್ತೊಂದು ಕ್ರಾಂತಿಕಾರಕ ಪರಿವರ್ತನೆಯಾಗುತ್ತಿದೆ. ದೇವಸ್ಥಾನಗಳು ಆಧ್ಯಾತ್ಮಿಕ ಕೇಂದ್ರಗಳ ಜತೆಗೆ ಸಾಮಾಜಿಕ ಪರಿರ್ವತೆನೆಯ ಕೆಲಸದಲ್ಲಿಯೂ ತೊಡಗಿಸಿಕೊಳ್ಳಬೇಕು. ಆಡಂಬರದ ವಿವಾಹಗಳು ಕಡಿಮೆಯಾಗಬೇಕು. ಸಾಮೂಹಿಕ ವಿವಾಹದ ಬಗ್ಗೆ ಸಮಾಜದಲ್ಲಿರುವ ತಪ್ಪು ಭಾವನೆ ದೂರವಾಗಬೇಕು ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಂಜೀವ ಮಠಂದೂರು, ಡಾ.ಭರತ್ ಶೆಟ್ಟಿ ವೈ., ಉಮಾನಾಥ ಕೋಟ್ಯಾನ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಸಿದ್ದಲಿಂಗ ಪ್ರಭು, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಡಾ. ಮಹರ್ಷಿ ಆನಂದ ಗುರೂಜಿ ಉಪನ್ಯಾಸ ನೀಡಿದರು. ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ವಂದಿಸಿದರು. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯಕ್ರಮದಡಿ ವಿವಾಹವಾಗಲಿರುವ ಸುನಿಲ್ ಎಸ್.ಬಂಗೇರ ಕುಟುಂಬಸ್ಥರಿಗೆ ಅರ್ಜಿ ವಿತರಿಸುವ ಮೂಲಕ ಸಚಿವರು ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಗೆ ಸಾಂಕೇತಿಕ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News