ಮಂಗಳೂರು ಗೋಲಿಬಾರ್ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲು ಸರಕಾರ ನಿರಾಕರಣೆ

Update: 2020-02-23 14:37 GMT
ಫೈಲ್ ಚಿತ್ರ

ಮಂಗಳೂರು, ಫೆ. 23: ಮಂಗಳೂರು ಗೋಲಿಬಾರ್ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ನಿರಾಕರಿಸಿರುವ ರಾಜ್ಯ ಸರಕಾರದ ನೀತಿಯನ್ನು ‘ಡಿ.19 ಗೋಲಿಬಾರ್ ಜಸ್ಟಿಸ್ ಫಾರಂ ಖಂಡಿಸಿದೆ ಮತ್ತು ಈ ಪ್ರಕರಣದ ಕುರಿತು ಹೋರಾಟ ನಡೆಸುವ ಎಚ್ಚರಿಕೆಯನ್ನು ಜಸ್ಟಿಸ್ ಫಾರಂ ನೀಡಿದೆ.

ಮಂಗಳೂರಿನಲ್ಲಿ ನಡೆದಿರುವ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಪೂರ್ವ ನಿಯೋಜಿತ ಕೃತ್ಯ ಎಂಬಂತೆ ವರ್ಣಿಸಲಾಗುತ್ತಿದೆ. ಒಂದು ವೇಳೆ ಪೂರ್ವನಿಯೋಜಿತವಾದಲ್ಲಿ ಯಾರು ಪೂರ್ವ ನಿಯೋಜಿತರಾಗಿದ್ದರು ಎನ್ನುವುದರ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ. ತನಿಖೆ ನಡೆಸದೆ ರಾಜ್ಯದ ಗೃಹಮಂತ್ರಿ ಈ ರೀತಿ ಹೇಳಿಕೆ ಕೊಡುವುದರ ಹಿಂದೆ ಪೂರ್ವ ನಿಯೋಜಿತರನ್ನು ರಕ್ಷಿಸಲು ಹೊರಟಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಜಸ್ಟೀಸ್ ಫಾರಂ ಸಂಚಾಲಕ ಜಲೀಲ್ ಕೃಷ್ಣಾಪುರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ ದಿನದ ಘಟನೆಯಲ್ಲಿ ಪ್ರತಿಭಟನಾಕಾರರನ್ನು ಮಾತ್ರ ತಪ್ಪಿತಸ್ಥರ ಹಾಗೆ ಬಿಂಬಸಲಾಗುತ್ತಿದೆ. ವಾಸ್ತವದಲ್ಲಿ ಆ ದಿನದ ಘಟನಾವಳಿಯ ಕೆಲವೊಂದು ಸಿಸಿ ಟಿವಿ ತುಣುಕುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ತುಣುಕುಗಳು ಬಹಿರಂಗಗೊಳಿಸಿದಂತೆ ಪೊಲೀಸರೆ ಪ್ರಚೋದಿಸಿರುವ ಬಗ್ಗೆ ಆರೋಪಗಳಿರುವುದರಿಂದ ಅವರುಗಳೇ ನೀಡಿರುವ ವರದಿಯನ್ನು ಆಧರಿಸಿಕೊಂಡು ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ. ಪೊಲೀಸರ ವಿರುದ್ಧ ದಾಳಿ ನಡೆಸುವುದು, ಠಾಣೆಗೆ ಬೆಂಕಿಯಿಡುವುದೆಂದರೆ ಅದು ನೇರವಾಗಿ ಕಾನೂನು ವ್ಯವಸ್ಥೆಯ ಮೇಲೆ ದಾಳಿ ನಡೆಸಿದ ಹಾಗೆ. ಆದುದರಿಂದ ಡಿ.19ರ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಸಮಾಜದ ಮುಂದಿಡಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಸ್ಟಿಸ್ ಫಾರಂ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News