ಬಾಂಧವ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಟ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪೂರಕ-ಡಿವೈಎಸ್‍ಪಿ ದಿನಕರ್

Update: 2020-02-23 15:57 GMT

ಪುತ್ತೂರು : ಹಿಂದೆಲ್ಲಾ ಪೊಲೀಸರಿಂದ ಜನರು ದೂರ ಸರಿಯುತ್ತಿದ್ದರು. ಈಗ ಬದಲಾವಣೆಯಾಗಿದ್ದು ಜನರು ಪೊಲೀಸರಿಗೆ ಹತ್ತಿರವಾಗುತ್ತಿದ್ದು, ಬಾಂಧವ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಟವು ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪೂರಕವಾಗಿದೆ ಎಂದು ಪುತ್ತೂರು ಡಿವೈಎಸ್‍ಪಿ ದಿನಕರ ಶೆಟ್ಟಿ ಹೇಳಿದರು.

ಅವರು ರವಿವಾರ ಬಾಂಧವ್ಯ ಪ್ರೆಂಡ್ಸ್ ಪುತ್ತೂರು ವತಿಯಿಂದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆದ 4ನೇ ವರ್ಷದ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇಂತಹ ಪಂದ್ಯಾಟಗಳಿಂದ ಜನರ ನಡುವೆ ಬಾಂಧವ್ಯ ಹೆಚ್ಚಾಗುವುದರ ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಯಲು ಸಹಕಾರಿಯಾಗುತ್ತದೆ. ಇದೊಂದು ಸಣ್ಣ ಪಂದ್ಯ ಮಾತ್ರವಲ್ಲ ದೊಡ್ಡ ಮಟ್ಟದ ಸೌಹಾರ್ಧದ ಚಿಂತನೆಯಾಗಿದೆ. ಇಂತಹ ಇನ್ನಷ್ಟು ಕ್ರೀಡಾಕೂಟಗಳು ನಡೆಯಬೇಕಾದ ಅಗತ್ಯವಿದೆ. ಎಲ್ಲಾ ರಾಜಕೀಯ ಪಕ್ಷದವರ ತಂಡವನ್ನೂ ಇಂತಹ ಆಟಗಳಲ್ಲಿ ಸೇರಿಸಿಕೊಳ್ಳುವ ಮೂಲಕ ಒಂದಾಗಿಸುವ ಅವಶ್ಯಕತೆಯಿದೆ ಎಂದರು. 

ಪಂದ್ಯಾಟವನ್ನು ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಬಾಂಧವ್ಯ ಕ್ರಿಕೆಟ್ ಪಂದ್ಯಾಟದಲ್ಲಿ ಇಂಜೆಕ್ಷನ್ ಕೊಡುವ ವೈದ್ಯರು, ಲಾಟಿ ಹಿಡಿಯುವ ಪೊಲೀಸರು, ಕೋಟು ಹಾಕುವ ವಕೀಲರು ಸೇರಿದಂತೆ ಎಲ್ಲಾ ವರ್ಗದವರೂ ಸೇರಿ ಮೈದಾನದಲ್ಲಿ ಸೇರಿ ಆಟವಾಡುವ ಮೂಲಕ ಬಾಂಧವ್ಯಕ್ಕೆ ಸಿಮೆಂಟ್ ಹಾಕಿ ಗಟ್ಟಿಗೊಳಿಸುವ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ. ತಮ್ಮ ವೃತ್ತಿಯ ಒತ್ತಡ ಕಡಿಮೆಯಾಗಲು ಇದು ಸಹಕಾರಿಯಾಗಿದೆ. ಪೊಲೀಸರು ಆಟದ ಮೂಲಕ ಎಲ್ಲರನ್ನೂ ಜೋಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದರು. 

ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ನಗರಸಭಾ ಸದಸ್ಯ ಜೀವಂಧರ್ ಜೈನ್, ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಶ್ರಜನ್ ಊರುಬೈಲು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸುರೇಂದ್ರ ಕಿಣಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‍ನ ಪ್ರಾಂಶುಪಾಲ ಗೋವಿಂದೇಗೌಡ ಶುಭ ಹಾರೈಸಿದರು.

ವೇದಿಕೆಯಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಉದ್ಯಮಿ ದಿನೇಶ್ ಮುರ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾಟದ ಸಂಘಟಕ ಪೊಲೀಸ್ ಕಾನ್ಸ್‍ಟೇಬಲ್ ಸ್ಕರಿಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News