‘ಅಬ್ಬ’ : ಕುಟುಂಬಸ್ಥರು ಜೊತೆಗೂಡಿ ವೀಕ್ಷಿಸಬಹುದಾದ ಕಲಾತ್ಮಕ ಚಿತ್ರ

Update: 2020-02-23 16:48 GMT

ಮಂಗಳೂರಿನ ಕ್ಯಾಪ್‌ಮೆನ್ ಮೀಡಿಯಾ ಮೇಕರ್ಸ್‌ ಲಾಂಛನದಡಿ ನಿರ್ಮಾಣಗೊಂಡ, ಎಂಜಿ ರಹೀಂ ರಚಿಸಿ, ನಿರ್ದೇಶಿಸಿರುವ ‘ಅಬ್ಬ’ ಚಲನಚಿತ್ರವು ಫೆ.21ರಂದು ತೆರೆ ಕಂಡಿದೆ. ನಗರದ ಫಿಝಾ ಮಾಲ್‌ನ ‘ಪಿವಿಆರ್’ನಲ್ಲಿ ಪ್ರತೀ ದಿನ ಸಂಜೆ 4ಕ್ಕೆ ಪ್ರದರ್ಶನಗೊಳ್ಳುತ್ತಿದೆ.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತರ್‌ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾದ ‘ಅಬ್ಬ’ ಚಲನಚಿತ್ರದ ಕಥಾ ವಸ್ತು ಸಂಕೀರ್ಣವಾದುದು. ಇದು ಅಪ್ಪಟ ಗ್ರಾಮೀಣ ಮತ್ತು ನಗರದ ಸುತ್ತ ಬೆಳೆದ ಕಥೆಯಾಗಿದೆ. ಮಂಗಳೂರು, ಉಳ್ಳಾಲ, ಫರಂಗಿಪೇಟೆ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ಎಲ್ಲೂ ಹಾಸ್ಯವಿಲ್ಲ, ಅಶ್ಲೀಲವಿಲ್ಲ, ವೃಥಾ ಕುಣಿತವಿಲ್ಲ, ಹೊಡಿಬಡಿಯೂ ಇಲ್ಲ, ಮರಸುತ್ತುವುದೂ ಇಲ್ಲ. ಮರಳ ರಾಶಿಯ ಮೇಲೆ ಗೆರೆ ಎಳೆಯುವುದಿಲ್ಲ. ಏನಿದ್ದರೂ ಒಂದು ಕುಟುಂಬ ಅಥವಾ ಒಂದು ಊರಲ್ಲಿ ನಡೆಯುವ ಬದುಕಿನ ಒಂದು ಸಣ್ಣ ಕಥೆಯ ಚಿತ್ರಣವಷ್ಟೆ. ಉತ್ತಮ ಸಂದೇಶ ಈ ಚಿತ್ರದ ಮೂಲಕ ಸಾರುವ ಪ್ರಯತ್ನ ಮಾಡಲಾಗಿದೆ. ಮೂರು ಹಾಡುಗಳು ಕೂಡ ಮನೋಜ್ಞವಾಗಿದೆ. ಹಿನ್ನೆಲೆ ಸಂಗೀತ, ಕ್ಯಾಮರಾ ಕೈ ಚಳಕ ಅದ್ಭುತವಾಗಿದೆ.

ಅಪ್ಪಟ ಬ್ಯಾರಿ ಭಾಷೆಯ ಚಿತ್ರ ಇದಾದರೂ ಕೂಡ ತುಳು ಮತ್ತು ಕೊಂಕಣಿ ಭಾಷಿಗರೂ ಇಲ್ಲಿ ಕಾಣಲು ಸಿಗುತ್ತಾರೆ. ಹಿಂದೂ-ಮುಸ್ಲಿಮ್ ಸೌಹಾರ್ದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬ್ಯಾರಿ ಸಾಂಸ್ಕೃತಿಕ ಪ್ರತೀಕವಾಗಿರುವ ದಫ್, ತಾಲೀಮು, ಕೋಲ್ಕಲಿ ಎದ್ದು ಕಾಣುತ್ತಿದೆ. ಬ್ಯಾರಿ ಭಾಷೆಯ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ವಿಭಿನ್ನ ಪ್ರಯೋಗ ಎನ್ನಬಹುದು. ಸಾಹಿತಿ ಮುಹಮ್ಮದ್ ಬಡ್ಡೂರ್, ನಟಿ ರೂಪಾ ವರ್ಕಾಡಿ, ಯುವ ನಟ ರಹೀಂ ಸಚ್ಚೇರಿಪೇಟೆ, ಎಂ.ಕೆ.ಮಠ, ಶುಭಾಂಗಿ, ಸತ್ತಾರ್ ಗೂಡಿನಬಳಿ, ಬಿ.ಎ.ಮುಹಮ್ಮದ್ ಅಲಿ, ಉಮರ್ ಯು.ಎಚ್., ಹುಸೈನ್ ಕಾಟಿಪಳ್ಳ, ಬಶೀರ್ ಬೈಕಂಪಾಡಿ ಮತ್ತಿತರರು ಈ ಚಿತ್ರಕ್ಕೆ ಜೀವ ತುಂಬಿದ್ದಾರೆ.

ಎಲ್ಪಿನ್ ಕೃಷ್ಣ ಮತ್ತು ಮುಹಮ್ಮದ್ ಬಡ್ಡೂರು ರಚಿಸಿದ ಹಾಡುಗಳಿಗೆ ರಿಯಾಝ್ ಪಯ್ಯೋಳಿ ಸಂಗೀತ ನೀಡಿದ್ದರೆ, ಇಸ್ಮಾಯೀಲ್ ತಳಂಗರೆ, ಸುಹೈಲ್ ಬಡ್ಡೂರು, ರಿಜಿಲಾ ರಿಯಾಝ್ ಸಂಗೀತ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News