‘ಕಾನೂನು ಮೀರಲ್ಲ’ ಎಂದ ಹೆಬ್ರಿ ಅರಣ್ಯಾಧಿಕಾರಿ ವಿರುದ್ಧ ಶಾಸಕ ರಘುಪತಿ ಭಟ್ ಕೆಂಡಾಮಂಡಲ!

Update: 2020-02-24 10:56 GMT

ಉಡುಪಿ, ಫೆ.24: ಮೀಸಲು ಅರಣ್ಯದಲ್ಲಿ ರಸ್ತೆ ನಿರ್ಮಿಸಲು ಅನುಮತಿ ನೀಡುವ ವಿಚಾರದ ಬಗ್ಗೆ 'ಕಾನೂನು ಮೀರಿ ಕೆಲಸ ಮಾಡಲ್ಲ' ಎಂದ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಅವರ ಮಾತಿಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕೆಂಡಾಮಂಡಲರಾಗಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ರಸ್ತೆ ವಿಚಾರದ ಹಿನ್ನೆಲೆಯಲ್ಲಿ ಇಂದಿನ ತಾಪಂ ಸಾಮಾನ್ಯ ಸಭೆಗೆ ಅರಣ್ಯಾಧಿಕಾರಿ ಮುನಿರಾಜು ಅವರನ್ನು ಕರೆಸಲಾಗಿತ್ತು. ಮೀಸಲು ಅರಣ್ಯದಲ್ಲಿರುವ ರಸ್ತೆ ನಿರ್ಮಿಸಲು ಅನುಮತಿ ನೀಡದ ವಿಚಾರವಾಗಿ ಮುನಿರಾಜು ಅವರನ್ನು ಶಾಸಕರು ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮುನಿರಾಜು, ‘ಕಾನೂನಿನಡಿಯಲ್ಲಿ ಏನು ಅವಕಾಶ ಇದೆ, ಅದನ್ನು ನಾನು ಮಾಡುತ್ತೇನೆ. ನಾನು ಮಾಡುತ್ತಿರುವುದು ತಪ್ಪು ಅಂತಾದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದು. ಕಾನೂನುಬಾಹಿರವಾಗಿ ನಾನು ಕೆಲಸ ಮಾಡಲು ಆಗಲ್ಲ’ ಎಂದರು. ಇದರಿಂದ ಸಿಟ್ಟಾದ ಶಾಸಕರು, ‘ಮೇಲಾಧಿಕಾರಿಗಳಿಗೆ ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ. ನೀವು ಬುದ್ದಿವಾದ ಹೇಳುವ ಅಗತ್ಯ ಇಲ್ಲ. ನೀವು ಆರ್‌ಎಫ್‌ಓ ಆಗಿ ಅದರ ಪ್ರಕಾರ ಕೆಲಸ ಮಾಡಿ. ಹಾಗೆ ನೀವು ಎಲ್ಲವೂ ಕಾನೂನಿನ ಪ್ರಕಾರ ಮಾಡಿದರೆ ಜನ ಸಾಮಾನ್ಯರು ಇಲ್ಲಿ ಬದುಕಲು ಆಗಲ್ಲ. ಇರುವ ರಸ್ತೆಯನ್ನು ಮಾಡುವಾಗ ನೀವು ಅಡ್ಡಗಾಲು ಹಾಕಬೇಡಿ’ ಎಂದರು.

ಅಲ್ಲಿರುವ ರಸ್ತೆಯೇ ಕಾನೂನುಬಾಹಿರ ಎಂದು ಅರಣ್ಯಾಧಿಕಾರಿ ಉತ್ತರಿಸಿದಾಗ, ಅದು ಯಾರ ತಪ್ಪು ಎಂದು ಶಾಸಕರು ಕೇಳಿದರು. ಆಗ ಅಧಿಕಾರಿ, 'ಅದು ನನ್ನ ತಪ್ಪು ಅಲ್ಲ' ಎಂದರು. ಇದರಿಂದ ಕೆಂಡಮಂಡಲರಾದ ಶಾಸಕರು, ಅಧಿಕಾರಿ ಮುನಿರಾಜು ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.

‘ನಾನು ಏನು ತಪ್ಪು ಮಾಡಿದ್ದೇನೆ. ನೀವು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ' ಎಂದು ಅರಣ್ಯಾಧಿಕಾರಿ ತಿಳಿಸಿದರು.

ಅಧಿಕಾರಿಯ ಸೀಟಿಗೆ ಆಕ್ಷೇಪ: ಈ ಮಧ್ಯೆ ಶಾಸಕರು, ಅರಣ್ಯಾಧಿಕಾರಿ ಮುನಿರಾಜು, ಜನಪ್ರತಿನಿಧಿಗಳು ಕುಳಿತುಕೊಳ್ಳುವ ಸೀಟಿನಲ್ಲಿ ಕುಳಿತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಲ್ಲಿಂದ ಎಬ್ಬಿಸಿದರು.‘ಅವರನ್ನು ಅಲ್ಲಿ ಕುಳಿತುಕೊಳ್ಳಲು ಯಾರು ಅವಕಾಶ ಕೊಟ್ಟದ್ದು. ನೀವು ಜನಪ್ರತಿನಿಧಿಯೇ’ ಎಂದು ಶಾಸಕರು ಪ್ರಶ್ನಿಸಿದರು. ಅದಕ್ಕೆ ಮುನಿರಾಜು, ಜಾಗ ಇಲ್ಲದಕ್ಕೆ ಕುಳಿತಿದ್ದೇನೆ. ನಾನು ಒಬ್ಬನೇ ಅಲ್ಲ ಇತರ ನಾಲ್ಕು ಮಂದಿ ಅಧಿಕಾರಿಗಳು ಕೂಡ ಕುಳಿತಿದ್ದೇವೆ ಎಂದರು. ಈ ವೇಳೆ ಶಾಸಕರು ಮುನಿರಾಜು ಅವರನ್ನು ಉದ್ದೇಶಿಸಿ, ‘ಅಲ್ಲಿಂದ ಎದ್ದು ಇಲ್ಲಿ ಬಂದು ಕುಳಿತುಕೊಳ್ಳಿ’ ಎಂದು ಏರುಧ್ವನಿಯಲ್ಲಿ ಮಾತನಾಡಿದರು. ಆಗ ಮುನಿರಾಜು ‘ಸರ್ ದಯವಿಟ್ಟು ಮರ್ಯಾದೆ ಕೊಟ್ಟು ಮಾತನಾಡಿ. ನಾವು ಕೂಡ ಸರಕಾರಿ ಅಧಿಕಾರಿಗಳು’ ಎಂದು ಹೇಳಿದರು. ‘ಅಧಿಕಾರಿಯಾದರೆ ಮೊದಲು ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಿ. ಇದು ತಾಪಂ ಸಭೆ, ಇಲ್ಲಿ ಜನಪ್ರತಿನಿಧಿಗಳ ಜೊತೆ ಮಾತನಾಡಲು ಕಲಿಯಬೇಕು’ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭ ಅರಣ್ಯಾಧಿಕಾರಿ ಅಲ್ಲಿಂದ ಎದ್ದು ಬಂದು ಅಧಿಕಾರಿಗಳ ಸಾಲಿನಲ್ಲಿ ತಂದಿರಿಸಿದ ಕುರ್ಚಿಯಲ್ಲಿ ಬಂದು ಕುಳಿತರು. ಇದೇ ವೇಳೆ ಕೆಲವು ಸದಸ್ಯರು ಕುಳಿತ ವಿಚಾರಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿ ಪರವಾಗಿ ಮಾತ ನಾಡಿದರು. ಬಳಿಕ ಎಲ್ಲರು ಸೇರಿ ಸಮಾಧಾನ ಪಡೆಸಲು ಪ್ರಯತ್ನಿಸಿದರು.

ಅರಣ್ಯಾಧಿಕಾರಿ ವಿರುದ್ಧ ನಿರ್ಣಯ: ಶಾಸಕರಿಗೆ ಪ್ರತ್ಯುತ್ತರ ನೀಡಿದ ಅರಣ್ಯಾಧಿಕಾರಿ ಮುನಿರಾಜು ವಿರುದ್ಧ ಸಭೆಯಲ್ಲಿ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಸೇರಿದಂತೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳ ಸಭೆಯಲ್ಲಿ ಇಂದು ಒಬ್ಬ ಅಧಿಕಾರಿ ಮಾತನಾಡಿದರೆ, ನಾಳೆ ಎಲ್ಲ ಅಧಿಕಾರಿಗಳು ಕೂಡ ಇದೇ ರೀತಿ ಮಾತನಾಡುತ್ತಾರೆ. ಮತ್ತೆ ನಮಗೆ ಯಾವುದೇ ಬೆಲೆ ಇರುವುದಿಲ್ಲ ಎಂದು ಶಾಸಕರು ತಿಳಿಸಿದರು. ಆದುದರಿಂದ ಸಭೆಗೆ ಗೌರವ ಬರಬೇಕಾದರೆ ಈ ಅಧಿಕಾರಿಯ ವಿರುದ್ಧ ಕ್ರಮಕ್ಕೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿದರು.

ಸದಸ್ಯ ಸುಧೀರ್ ಕುಮಾರ್ ಮಾತನಾಡಿ, ಅರಣ್ಯಾಧಿಕಾರಿ ಮುನಿರಾಜು ಶಾಸಕರಿಗೆ ಅಗೌರವ ತೋರಿಸಿದ್ದು, ಈ ಮೂಲಕ ತಾಪಂ ಸಭೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಆದುದರಿಂದ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ನಿರ್ಣಯ ಮಾಡಬೇಕು’ ಎಂದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಉಪಸ್ಥಿತರಿದ್ದರು.

ಉಡುಪಿ ವಲಯ ಅರಣ್ಯಾಧಿಕಾರಿಗೂ ತರಾಟೆ

ಇದೇ ಸಭೆಯಲ್ಲಿ ಶಾಸಕ ರಘುಪತಿ ಭಟ್, ಬ್ರಹ್ಮಾವರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಮರಗಳ ತೆರವಿಗೆ ಅವಕಾಶ ನೀಡಲ್ಲ ಎಂದು ಆರೋಪಿಸಿ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ವನಮಹೋತ್ಸವದಲ್ಲಿ ನೆಟ್ಟ ಗಿಡಗಳನ್ನು ಈಗ ರಸ್ತೆ ಅಭಿವೃದ್ಧಿಗಾಗಿ ಕಡಿಯಲು ನೀವು ಬಿಡದಿದ್ದರೆ, ಇನ್ನು ಮುಂದೆ ನಾವು ನಿಮಗೆ ವನ ಮಹೋತ್ಸವ ಮಾಡಲು ಬಿಡಲ್ಲ ಎಂದು ಹೇಳಿದರು. ‘ನಾವು ಸರಕಾರದಿಂದ ರಸ್ತೆ ಅಭಿವೃದ್ಧಿಗಾಗಿ ಹಣವನ್ನು ಕಾಡಿಬೇಡಿ ತರುತ್ತಿದ್ದೇವೆ. ಆದರೆ ನೀವು(ಅರಣ್ಯಾಧಿಕಾರಿಗಳು) ಡೀಮ್ಡ್ ಫಾರೆಸ್ಟ್ ಕಾರಣ ಹೇಳಿ ಅದಕ್ಕೆ ಅನುಮತಿ ನೀಡುತ್ತಿಲ್ಲ. ಹಾಗಾದರೆ ಡೀಮ್ಡ್ ಫಾರೆಸ್ಟ್‌ ನಲ್ಲಿ ರಸ್ತೆ ಮಾಡಲು ಅವಕಾಶ ಇಲ್ಲವೇ. ನಾವು ನಿಮ್ಮ ಕಾಲು ಹಿಡಿಯಬೇಕೆ’ ಎಂದು ಶಾಸಕರು ಪ್ರಶ್ನಿಸಿದರು.

ಬಿಜೆಪಿ ತಾಪಂ ಸದಸ್ಯನ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಅಧಿಕಾರಿ!

ಇತ್ತೀಚೆಗೆ ಬೇಳಂಜೆ ಗ್ರಾಮದ ಕೊಪ್ಪರಗುಂಡಿ ಎಂಬಲ್ಲಿ ಮಣ್ಣಿನ ಅಡಿಯಲ್ಲಿ ಹೂತಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ 87 ಮರದ ದಿಮ್ಮಿಗಳನ್ನು ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಕಾರ್ಕಳ ತಾಪಂ ಬಿಜೆಪಿ ಸದಸ್ಯ ಅಮೃತ್ ಕುಮಾರ್ ಶೆಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಇವರ ವರ್ಗಾವಣೆ ಮಾತು ಕೂಡ ಕೇಳಿಬಂದಿತ್ತು. ಆಗ ಇವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿತ್ತು. ನಿಷ್ಠಾವಂತ, ದಿಟ್ಟ ಅಧಿಕಾರಿ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News