‘ಅಂತರಾಳದ ಗೀತೆಗಳು’ ಕೃತಿ ಬಿಡುಗಡೆ

Update: 2020-02-24 13:01 GMT

ಮಂಗಳೂರು, ಫೆ. 24: ಸಾಹಿತಿ ಬಿ.ಎಂ.ಇಚ್ಲಂಗೋಡು ಅವರು ಬರೆದ ‘ಅಂತರಾಳದ ಗೀತೆಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ವಿಶಿಷ್ಟ ವ್ಯಕ್ತಿತ್ವದ ಪ್ರೊ.ಇಚ್ಲಂಗೋಡು ಅವರು ತಮ್ಮ ಇಳಿವಯಸ್ಸಿನಲ್ಲೂ ಕೃತಿಯನ್ನು ಹೊರತರುತ್ತಿರುವುದು ಹೆಮ್ಮೆಯ ವಿಷಯ. ಅಂತರಾಳದ ಗೀತೆಗಳು ಅವರ ಜೀವನಾನುಭವದ ಕೃತಿಯಾಗಿ ಮೂಡಿ ಬಂದಿದೆ ಎಂದರು.

ಬದುಕಿನ ವಿವಿಧ ಆಯಾಮಗಳ ಚಿತ್ರಣ, ಮೌಲ್ಯಯುತ ಬದುಕಿನ ಸಂದೇಶಗಳು ಇಚ್ಲಂಗೋಡು ಅವರ ಸಾಹಿತ್ಯದಲ್ಲಿವೆ.ಕವಿ ಹೃದಯದ ಚಿಂತಕರಾಗಿರುವ ಅವರಿಂದ ಇನ್ನಷ್ಟು ಕೃತಿಗಳು ಹೊರಬರುವಂತಾಗಲಿ ಎಂದು ಕಲ್ಕೂರ ಆಶಿಸಿದರು.

ಕೃತಿಕಾರ ಪ್ರೊ.ಬಿ.ಎಂ.ಇಚ್ಲಂಗೋಡು ಅವರು ಮಾತನಾಡಿ, ನನ್ನ ಜೀವನದಲ್ಲಿ ಕಂಡುಕೊಂಡ ಅನುಭವವನ್ನೇ ಬರಹ ರೂಪಕ್ಕಿಳಿಸಿದ್ದೇನೆ. ಹೇ ಮಾನವ, ಅಂತರಾಳದ ಹಾಡು, ಒಳದನಿಯ ಹಾಡು, ಆತ್ಮ ನಿವೇದನೆ, ಮಗುವಿನಂತಾಗಬೇಕು ಹೀಗೆ 20 ಗೀತೆಗಳು ಅಂತರಾಳದ ಗೀತೆಯಲ್ಲಿ ಅಡಕವಾಗಿದೆ ಎಂದರು.

ಮೂಡಬಿದಿರೆ ಕನ್ನಡ ಸಂಘದ ಕಾರ್ಯದರ್ಶಿಗಳಾದ ಜೀವನ್, ಹಾರಿಸ್ ಮುಹಮ್ಮದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News