ಸ್ವಸಹಾಯ ಗುಂಪಿನ ಯಶೋಗಾಥೆ ಬೆಳ್ಳಿತೆರೆಗೆ : ಡಾ.ಎಂ.ಎನ್.ರಾಜೇಂದ್ರ ಕುಮಾರ್

Update: 2020-02-24 14:40 GMT

ಮಂಗಳೂರು, ಫೆ. 24: ನವೋದಯ ಸ್ವಸಹಾಯ ಗುಂಪುಗಳ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಸಹಿತ ಆಸುಪಾಸಿನ ಜಿಲ್ಲೆಗಳ ಸಾಮಾನ್ಯ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಈ ಯಶೋಗಾಥೆಗಳನ್ನು ಆಧರಿಸಿ ಸಿನೆಮಾ ತೆಗೆಯಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಮೊಳಹಳ್ಳಿ ಶಿವರಾಯರ ಸಭಾಂಗಣದಲ್ಲಿ ಸೋಮವಾರ ಜರುಗಿದ ಮೈಸೂರು ವಿಭಾಗದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ನವೋದಯ ಸ್ವಸಹಾಯ ಸಂಘ ಸ್ಥಾಪಿಸಲಾಗಿತ್ತು. ನವೋದಯ ಎಂಬ ಹೆಸರನ್ನು ಸಾಮಾನ್ಯ ಮಹಿಳೆಯೊಬ್ಬರು ಆಯ್ಕೆ ಮಾಡಿದ್ದರು ಎಂದವರು ನೆನಪಿಸಿಕೊಂಡರು.

ಮತ್ತೊಮ್ಮೆ ಇಸ್ರೇಲ್ ಪ್ರವಾಸ: ಕಳೆದ ವರ್ಷ 26 ಮಂದಿ ರೈತರನ್ನು ಇಸ್ರೇಲ್‌ಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಇದು ಸಹಕಾರಿ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಥಮ. ಈ ಬಾರಿಯೂ ಮಹಿಳೆಯರನ್ನು ಒಳಗೊಂಡ ರೈತರ ತಂಡವನ್ನು ಇಸ್ರೇಲ್‌ಗೆ ಕಳುಹಿಸಲಾಗುವುದು ಎಂದರು.

ದೊರೆತ ಅವಕಾಶವನ್ನು ಸಂದರ್ಭಕ್ಕೆ ಅನುಗುಣವಾಗಿ ಸಮರ್ಥವಾಗಿ ಬಳಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸಾಧ್ಯವಾಯಿತು. ಇದರಿಂದ ಜನರ ಪ್ರೀತಿ ಸಿಕ್ಕಿದೆ. ಸಹಕಾರಿ ಕ್ಷೇತ್ರದಲ್ಲಿ ಆರ್‌ಬಿಐ ಗದಾಪ್ರಹಾರ ಮಾಡುತ್ತಲೇ ಬಂದಿದೆ. ಕೃಷಿಕರ ಸೇವೆಯಿಂದ ಬರುವ ಆದಾಯಕ್ಕೆ ಆದಾಯ ತೆರಿಗೆ ಹಾಕಬೇಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಒಂದು ವೇಳೆ ತೆರಿಗೆ ಹಾಕುವುದಿದ್ದರೂ ಮುಂದಿನ ವ್ಯವಹಾರಗಳಿಗೆ ಹಾಕುವಂತೆ ವಿನಂತಿಸಿದ್ದೇವೆ ಎಂದರು.

ಜನ್ಮ ದಿನಾಚರಣೆ: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ 71ನೇ ಹುಟ್ಟುಹಬ್ಬವನ್ನು ಈ ಸಂದರ್ಭ ಆಚರಿಸಲಾಯಿತು. ಡಾ.ಎಂಎನ್‌ಆರ್ ಮತ್ತು ಅರುಣಾ ರಾಜೇಂದ್ರಕುಮಾರ್ ದಂಪತಿ ಕೇಕ್ ಕತ್ತರಿಸಿ, ಸಿಹಿ ಹಂಚಿಕೊಂಡರು. ವಿವಿಧ ಸಹಕಾರ ಸಂಘಗಳು, ಸಂಘಟನೆ ಪ್ರತಿನಿಧಿಗಳು ದಂಪತಿಯನ್ನು ಗೌರವಿಸಿದರು.

ಅಭಿನಂದನಾ ಭಾಷಣ ನಡೆಸಿದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಸಹಕಾರ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ ರಾಜೇಂದ್ರಕುಮಾರ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಎನ್.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಮಹಾಮಂಡಳ ನಿರ್ದೇಶಕರಾದ ಎ.ಕೆ. ಮನು ಮುತ್ತಪ್ಪ, ಎಚ್.ಎಸ್. ಪೂರ್ಣಿಮಾ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಂಗಳೂರು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಸಹಕಾರ ಇಲಾಖೆ ಅಧಿಕಾರಿ ಬಿ.ಕೆ. ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒ ರವೀಂದ್ರ ಬಿ. ಮುಖ್ಯ ಅತಿಥಿಗಳಾಗಿದ್ದರು. ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್, ನಬಾರ್ಡ್ ನಿವೃತ್ತ ಅಧಿಕಾರಿ ವೈ.ವಿ. ಗುಂಡೂರಾವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿದರು. ಶಶಿಧರ ಬಾಳ್ಯೊಟ್ಟು ವಂದಿಸಿದರು. ಸಹಕಾರ ವಾರಪತ್ರಿಕೆಯ ಗೌರವ ಸಂಪಾದಕ ಪಿ.ರುದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಫೆ. 25: ಕಂಬಳ ಸಾಧಕರಿಗೆ ಸನ್ಮಾನ

ಕಂಬಳದ ಕೋಣಗಳನ್ನು ಓಡಿಸಿ ಹಿಂದೆ ಪ್ರಶಸ್ತಿ ಗೆದ್ದವರನ್ನು ಹಾಗೂ ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ ಅವರನ್ನು ಫೆ.25ರಂದು ಮಧ್ಯಾಹ್ನ 3ಕ್ಕೆ ಮಂಗಳೂರು ಎಸ್‌ಡಿಸಿಸಿಸಿ ಬ್ಯಾಂಕ್‌ನಲ್ಲಿ ಸನ್ಮಾನಿಸಲಾಗುವುದು. ಮುಂದಿನ ವರ್ಷ ದಿಂದ ಕಂಬಳ ಮಾಲಕರನ್ನು ಕೂಡ ಗೌರವಿಸುವ ಯೋಜನೆ ಇದೆ ಎಂದು ಡಾ.ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News