ಭೂಗತ ಪಾತಕಿ ರವಿ ಪೂಜಾರಿಯ ಸೆರೆಯೊಂದಿಗೆ ಹಳೆ ಪ್ರಕರಣಗಳಿಗೆ ಜೀವ

Update: 2020-02-24 15:43 GMT
ರವಿ ಪೂಜಾರಿ

ಮಂಗಳೂರು : ದಕ್ಷಿಣ ಆಫ್ರಿಕಾದ ಸೆನಗಲ್‌ನಿಂದ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮತ್ತು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಪೊಲೀಸ್ ತಂಡ ಸೋಮವಾರ ಬೆಂಗಳೂರಿಗೆ ಕರೆತರುವುದರೊಂದಿಗೆ ದ.ಕ. ಜಿಲ್ಲೆಯ ವಿವಿಧೆಡೆ ದಾಖಲಾಗಿರುವ 30 ಕ್ಕೂ ಅಧಿಕ ಪ್ರಕರಣಗಳಿಗೆ ಮರುಜೀವ ಲಭಿಸಿದೆ.

ಅದರಂತೆ ದ.ಕ.ಜಿಲ್ಲಾ ಮತ್ತು ಮಂಗಳೂರು ನಗರ ಪೊಲೀಸ್ ಇಲಾಖೆಯು ರವಿ ಪೂಜಾರಿಯನ್ನು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ.

ರವಿ ಪೂಜಾರಿ ವಿರುದ್ಧ ಬೆಂಗಳೂರು, ಮಂಗಳೂರು, ಉಡುಪಿ ಹಾಗು ಮುಂಬೈ ಸಹಿತ 135ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಅತ್ಯಧಿಕ ಅಂದರೆ 34 ಪ್ರಕರಣಗಳು ದ.ಕ.ಜಿಲ್ಲೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಮೂಲವೊಂದರ ಪ್ರಕಾರ ಈತನ ವಿರುದ್ಧ ದಾಖಲಾಗಿರುವ ಪ್ರಕರಣದ ಸಂಖ್ಯೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲತಃ ಉಡುಪಿ ಜಿಲ್ಲೆಯವನಾದ ರವಿ ಪೂಜಾರಿ ಹಫ್ತಾ ಬೆದರಿಕೆಯಲ್ಲಿ ಸಿದ್ಧಹಸ್ತ. ಈತನ ವಿರುದ್ಧ 2007ರಿಂದ 2018ರ ತನಕ ದ.ಕ.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 34 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಅದರಲ್ಲಿ 1 ಕೊಲೆ ಪ್ರಕರಣ, 3 ಶೂಟೌಟ್ ಪ್ರಕರಣಗಳು, 1 ಅಪಹರಣ, ಜೈಲಿನಲ್ಲಿ ವಿಚಾರಣಾಧೀನ ಕೈದಿಗಲಾಗಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿದ 1 ಪ್ರಕರಣ ಹಾಗೂ 28 ಬೆದರಿಕೆ ಪ್ರಕರಣಗಳು ಸೇರಿವೆ ಎಂದು ತಿಳಿದು ಬಂದಿದೆ. ಆದರೆ, ಯಾವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಮಂಗಳೂರು-ಉಡುಪಿಯಿಂದ ಸ್ಥಳಾಂತರಗೊಂಡ ಈತ ಮುಂಬೈಯಲ್ಲಿ ಕೆಲಕಾಲ ಅವಿತುಕೊಂಡಿದ್ದ. ಬಳಿಕ ವಿದೇಶದಲ್ಲಿ ತನ್ನ ಕುಕೃತ್ಯ ನಡೆಸುತ್ತಿದ್ದ. ಕೆಲವನ್ನು ಸ್ವತಃ ತಾನೇ ಮಾಡಿದರೆ, ಇನ್ನು ಕೆಲವು ಪ್ರಕರಣವನ್ನು ಸ್ವಪ್ರತಿಷ್ಠೆಗಾಗಿ ತಾನೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದ ಎಂಬ ಆರೋಪವೂ ಈತನ ಮೇಲಿದೆ. ಪ್ರಕರಣ ನಡೆದ ಬೆನ್ನಿಗೆ ಮಾಧ್ಯಮಗಳ ಕಚೇರಿಗೆ ಫೋನ್ ಕರೆ ಮಾಡಿ ತಾನೇ ಇದನ್ನು ಮಾಡಿರುವೆ ಎಂದು ಹೇಳಿಕೊಳ್ಳುವ ಖಯಾಲಿಯೂ ಈತನಿಗೆ ಇತ್ತೆನ್ನಲಾಗಿದೆ.

2009ರಲ್ಲಿ ನಡೆದ ನ್ಯಾಯವಾದಿ ನೌಶಾದ್ ಕಾಶಿಮ್‌ಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರವಿ ಪೂಜಾರಿಗೆ ಶಿಕ್ಷೆಯಾಗಿತ್ತು. ಆದರೆ, ಅದನ್ನು ಅನುಭವಿಸಲು ಈತ ಪೊಲೀಸರ ಕೈಗೆ ಸಿಗಲೇ ಇಲ್ಲ.

ಹಫ್ತಾ ಹಣ ನೀಡಲು ನಿರಾಕರಿಸಿದ ಆರೋಪದ ಮೇಲೆ ವಾಸ್‌ಲೇನ್‌ನ ಪ್ರೆಸಿಡೆನ್ಸಿ ಬಿಲ್ಡರ್ಸ್‌ (ಕದ್ರಿ ಠಾಣೆ-2008), ಕೂಳೂರಿನ ಎಚ್‌ಎಂಎಲ್ (ವರ್ಲ್ಡ್ ವೈಡ್) ಶಿಪ್ಪಿಂಗ್ ಕಂಪೆನಿ (ಕಾವೂರು ಠಾಣೆ- 2008), ಬಿಜೈ ಆನೆಗುಂಡಿಯ ಭಾರತಿ ಬಿಲ್ಡರ್ಸ್‌ (ಉರ್ವ ಠಾಣೆ- 2014)ನಲ್ಲಿ ಶೂಟೌಟ್ ನಡೆಸಿದ್ದ ಆರೋಪವೂ ಈತನ ಮೇಲಿದೆ.

ಉದ್ಯಮಿ ಡಿಕ್ಸಿ ಶಿಪಿಂಗ್‌ನ ದೇವಾನಂದ ಶೆಟ್ಟಿ (ಬರ್ಕೆ ಠಾಣೆ-2010), ರಾಜಶೇಖರ ಬಲ್ಲಾಳ್ (ಉರ್ವ ಠಾಣೆ- 2013), ಪನಾಮಾ ಸಂಸ್ಥೆಯ ವಿವೇಕ್‌ರಾಜ್ (ಬರ್ಕೆ ಠಾಣೆ- 2013), ನಾರ್ಬರ್ಟ್ ಶಾನ್ ರೇಗೊ (ಮೂಡುಬಿದಿರೆ ಠಾಣೆ-2013), ವಕೀಲ ರವೀಂದ್ರನಾಥ್ (ಬರ್ಕೆ ಠಾಣೆ-2014), ಡೆಲ್ಟಾ ಇನ್ಫಾರ್  ಲಾಜಿಸ್ಟಿಕ್‌ನ ಅಹ್ಮದ್ ಮೊದಿನ್ (ಕಾವೂರು ಠಾಣೆ- 2014), ವೈದ್ಯ ಡಾ. ದೀಪಕ್ ರೈ (ಕದ್ರಿ ಠಾಣೆ- 2018), ಸ್ವರ್ಣೋದ್ಯಮಿ ಕಿಶೋರ್ ರೇವಣ್ಕರ್ (ಕದ್ರಿ ಠಾಣೆ- 2018), ಎಸ್.ಎಲ್. ಶೇಟ್ ಜುವೆಲ್ಲರಿ (ಬರ್ಕೆ ಠಾಣೆ- 2018), ಕಣಚೂರು ಸಂಸ್ಧೆಯ ಕಣಚೂರು ಮೋನುರಿಗೆ ಬೆದರಿಕೆ (ಕೊಣಾಜೆ ಠಾಣೆ- 2018), ಹರೀಶ್ ಬಿ. ಕರ್ಕೇರಾಗೆ ಬೆದರಿಕೆ ಹಾಕಿದ (ಬಂದರು-2007) ಪ್ರಕರಣ, ಕಂಡತ್‌ಪಳ್ಳಿಯ ಉದ್ಯಮಿ ನೂರ್ ಮುಹಮದ್‌ಗೆ ಬೆದರಿಕೆ (ಬಂದರು-2008) ಪ್ರಕರಣ, ಮನ್ಸೂರ್ ಅಹ್ಮದ್ ಅವರಿಗೆ ಬೆದರಿಕೆ (2012), ಬಿಲ್ಡರ್‌ಗಳಾದ ಡಿ.ಬಿ. ಮೆಹ್ತಾ (2013 ಮತ್ತು 2015), ನೋಯೆಲ್ ಪಿಂಟೊ (2013 ಮತ್ತು 2014), ವೈದ್ಯ ಡಾ. ಎರೋಲ್ ಪಿಂಟೊ (2014), ಉದ್ಯಮಿ ಪ್ರಭಾಕರ ಪೂಂಜಾ (2016), ಕಾಂಚನ ಟೆಕ್ಸ್‌ಟೈಲ್ಸ್‌ನ ದೀಪಕ್ ವಸಾನಿ (2013), ಮಾಜಿ ಸಚಿವ ಅಭಯ ಚಂದ್ರ ಜೈನ್ (ಮೂಡುಬಿದಿರೆ ಠಾಣೆ- 2015)ಗೆ ಬೆದರಿಕೆ ಹಾಕಿದ ಪ್ರಕರಣ, ಮಹಾಸತಿ ಬಿಲ್ಡರ್ಸ್‌ಗೆ ಬೆದರಿಕೆ (ಕದ್ರಿ ಠಾಣೆ 2012), ಬಿಲ್ಡರ್ ಅಶೋಕ್ ಕುಮಾರ್ ರೈ (2013), ಉದ್ಯಮಿ ವಿಲಿಯಂ ಅಂತೋನಿ ಡಿಸೋಜ (2013)ಗೆ ಬೆದರಿಕೆ ಹಾಕಿದ ಪ್ರಕರಣ, ಬಿಲ್ಡರ್ ಆನಂದ ಪೂಜಾರಿ (ಕಾವೂರು-2013)ಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಬಿಲ್ಡರ್ ಸನತ್ ಕುಮಾರ್ ಶೆಟ್ಟಿ ಬೆದರಿಕೆ (ಪಾಂಡೇಶ್ವರ-2013) ಪ್ರಕರಣ, ಉದ್ಯಮಿ ವಿವೇಕ್ ರಾಜ್‌ಗೆ (ಬರ್ಕೆ-2013) ಬೆದರಿಕೆ ಪ್ರಕರಣ, ಉದ್ಯಮಿ ವಿವೇಕ್ ರಾಜ್‌ಗೆ ಬೆದರಿಕೆ ಪ್ರಕರಣ (ಬರ್ಕೆ-2011) ಸೇರಿವೆ.

ಕಿನ್ನಿಗೋಳಿಯ ಉದ್ಯಮಿ ಸಿಪ್ರಿಯನ್ ಡಿಸೋಜಾಗೆ ಬೆದರಿಕೆ ಮತ್ತು ಅಪಹರಣ (ಮುಲ್ಕಿ ಠಾಣೆ-2012), ಜೈಲಿನಲ್ಲಿದ್ದ ತನ್ನ ಸಹಚರರಿಗೆ (ದಿನೇಶ್, ಪ್ರತಾಪ್ ಮತ್ತು ರಿತೇಶ್) ಹಣ ಪೂರೈಕೆ ಮಾಡಿದ ಪ್ರಕರಣವೂ ಈತನ ಮೇಲಿದೆ.

ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಪಾತಕಿ ರವಿ ಪೂಜಾರಿ ಪೊಲೀಸರಿಗೆ ಬೇಕಾಗಿದ್ದು, ಪೊಲೀಸರು ಅವುಗಳಿಗೆ ಮರುಜೀವ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News