9 ಲಕ್ಷ ಮೆಟ್ರಿಕ್ ಟನ್ ಮರಳಿನ ದಿಬ್ಬ ತೆರವಿಗೆ ಅನುಮೋದನೆ: ರಘುಪತಿ ಭಟ್

Update: 2020-02-24 16:11 GMT

ಉಡುಪಿ, ಫೆ.24: ಜಿಲ್ಲೆಯ ಸಿಆರ್‌ಝೆಡ್ ವ್ಯಾಪ್ತಿಯ ನದಿಗಳಲ್ಲಿ ಹೊಸ ದಾಗಿ 9ಲಕ್ಷ ಮೆಟ್ರಿಕ್ ಟನ್ ಮರಳಿನ ದಿಬ್ಬಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ತೆರವುಗೊಳಿಸಲು ಕೆಸಿಎಂಝಡ್ನಿಂದ ಅನುಮೋದನೆ ದೊರೆತಿದೆ. ಇನ್ನು ಎರಡು ಮೂರು ದಿನಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ 7 ಮಂದಿಯ ಜಿಲ್ಲಾ ಮರಳು ಸಮಿತಿ ಸಭೆ ಕರೆದು ವಾರದೊಳಗೆ 171 ಪರವಾನಗಿ ದಾರರಿಗೆ ಮರಳು ದಿಬ್ಬ ತೆರವು ಮಾಡಲು ಪರವಾನಗಿ ನೀಡಲಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಸೋಮವಾರ ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ದಿನೇಶ್ ಕೋಟ್ಯಾನ್, ಕಾಪು ಪರಿಸರದಲ್ಲಿ ಕಡಿಮೆ ದರದಲ್ಲಿ ಮರಳು ಸಿಗುತ್ತಿಲ್ಲ. ಅದಕ್ಕೆ ಇಲ್ಲಿನ ನದಿಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಶಾಸಕರು, ಈ ಹಿಂದೆ ಜಿಲ್ಲೆಯಲ್ಲಿ 8ಲಕ್ಷ ಮೆಟ್ರಿಕ್ ಟನ್ ಮರಳನ್ನು ಗುರುತಿಸಿ, ಅದರಲ್ಲಿ ಐದು ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆರವು ಗೊಳಿಸಲಾಗಿತ್ತು. ಆಗ ಪಡುಬಿದ್ರಿಯ ಶಾಂಭವಿ, ಪಾಂಗಾಳ, ಕಟಪಾಡಿ, ಹೆಜಮಾಡಿ ಹಾಗೂ ಬಾರಕೂರಿನ ಹಂದಾಡಿಯ ಹೊಳೆಗಳಲ್ಲಿ ಸರ್ವೆ ನಡೆಸಿರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಮರಳಿನ ಕೊರತೆ ಎದುರಾಗಿತ್ತು ಎಂದರು.

ಇದೀಗ ಈ ಹೊಳೆಗಳಲ್ಲಿ ಹೊಸದಾಗಿ ಸರ್ವೆ ನಡೆಸಿ ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ತೆರವು ಮಾಡಲು ಅನುಮೋದನೆ ದೊರೆತಿದೆ ಒಂದೆರಡು ವಾರಗಳಲ್ಲಿ 171 ಪರವಾನಿಗೆದಾರರಿಗೆ ಮರಳನ್ನು ವಿತರಿಸಿ, ಆ್ಯಪ್ ಮೂಲಕ ಮರಳನ್ನು ಎಲ್ಲರು ಪಡೆಯಬಹುದಾಗಿದೆ ಎಂದು ಅವರು ಭರವಸೆ ನೀಡಿದರು.

ಸದಸ್ಯೆ ರೇಣುಕ ಮಾತನಾಡಿ, ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ನಿರ್ಮಿಸಲು ಭೂಮಿ ಕಳೆದುಕೊಂಡ 14 ಕುಟುಂಬಗಳಿಗೆ ಈವರೆಗೆ ಮನೆ ನಿರ್ಮಿಸಿ ಕೊಟ್ಟಿಲ್ಲ. ಕಳೆದ ಮೂರು ವರ್ಷಗಳಿಂದ ಮನೆ ಇಲ್ಲದೆ ಈ ಕುಟುಂಬಗಳು ಬದುಕು ನಡೆಸುತ್ತಿವೆ. ಇದರಲ್ಲಿ ಪರಿಶಿಷ್ಟ ಜಾತಿಯ ಕುಟುಂಬ ಕೂಡ ಇದೆ. ವಸತಿ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಅರ್ಧ ಮನೆ ನಿರ್ಮಾಣವಾಗಿದ್ದು, ಅದು ಈಗ ಶಿಥಿಲಗೊಂಡಿದೆ ಎಂದು ದೂರಿದರು. ಈ ಬಗ್ಗೆ ನಿರ್ಮಿತಿ ಕೇಂದ್ರದ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ತಿಳಿಸಿದರು.

ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ವಹಿಸಿದ್ದರು. ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News