ಸುಮನಸಾ ಕೊಡವೂರು ‘ರಂಗಹಬ್ಬ-8’ ಉದ್ಘಾಟನೆ

Update: 2020-02-24 16:31 GMT

ಉಡುಪಿ, ಫೆ.24: ರಾಷ್ಟ್ರ ಮತ್ತು ಜಾಗತಿಕ ರಂಗಭೂಮಿಗಿಂತ ಪ್ರಾದೇಶಿಕ ರಂಗಭೂಮಿ ಮೇಲ್ಮಟ್ಟದಲ್ಲಿದ್ದು, ಇದಕ್ಕೆ ಹೆಚ್ಚಿನ ಮಹತ್ವ ಸಿಗಬೇಕಾಗಿದೆ ಎಂದು ಮೂಡುಬಿದ್ರಿ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದ್ದಾರೆ.
 ಸೋಮವಾರ ಅಜ್ಜರಕಾಡಿನಲ್ಲಿರುವ ಭುಜಂಗಪಾರ್ಕ್‌ನ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಆಯೋಜಿಸಿದ ಒಂದು ವಾರದ ‘ರಂಗಹಬ್ಬ-8’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಾಗತಿಕ ರಂಗಭೂಮಿ ಇತಿಹಾಸದಲ್ಲಿ ಭಾರತದ ರಂಗಭೂಮಿ ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿದೆ. ನಮ್ಮ ಪುರಾಣದಲ್ಲಿಯೂ ರಂಗಭೂಮಿ ಯ ಉಲ್ಲೇಖವಿದ್ದು, ಇದಕ್ಕೆ ಕಾರ್ನಾಡರ ಅಗ್ನಿ ಮತ್ತು ಮಳೆ ನಾಟಕ ಒಳ್ಳೆಯ ನಿದರ್ಶನ. ನೆಲದ ಜಾನಪದ ಸಂಸ್ಕೃತಿ ಎತ್ತಿಹಿಡಿಯುವ ಪ್ರಾದೇಶಿಕ ರಂಗಭೂಮಿ ಇಂದು ಮುನ್ನೆಲೆಗೆ ಬರಬೇಕಿದೆ. ಮಣ್ಣಿನ ವಾಸನೆ ಪ್ರಾದೇಶಿಕ ರಂಗಭೂಮಿ ಯಲ್ಲಿದೆ ಎಂದು ಮೋಹನ್ ಆಳ್ವ ಹೇಳಿದರು.

ಸುಮನಸಾ ಕೊಡವೂರು ಅವರ ಎಂಟನೇ ವರ್ಷದ ‘ರಂಗಹಬ್ಬ-8’ನ್ನು ತೇರನ್ನು ಎಳೆಯುವ ಮೂಲಕ ಉದ್ಘಾಟಿಸಲಾಯಿತು. ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಉದ್ಯಮಿಗಳಾದ ಆನಂದ ಪಿ.ಸುವರ್ಣ, ಸಾಧು ಸಾಲ್ಯಾನ್, ನಗರಸಭೆ ಸದಸ್ಯೆ ರಶಿ ್ಮಚಿತ್ತರಂಜನ್ ಭಟ್, ಶಿಕ್ಷಕ ನಾಗರಾಜ್ ಜಿ.ಎಸ್, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ ಜಿ.ಕೊಡವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶರ್ಕ ಕುಮಾರ್ ಬೆಕ್ಕೇರಿ ಇದ್ದರು.

ಮಲಬಾರ್ ಗೋಲ್ಡ್‌ನ ರಾಘವೇಂದ್ರ ನಾಯಕ್, ಸಂಚಾಲಕ ಭಾಸ್ಕರ ಪಾಲನ್ ಅವರೂ ಭಾಗವಹಿಸಿದ್ದರು. ಸುಮನಸಾ ಗೌರವಾಧ್ಯಕ್ಷ ಎಂ.ಎಸ್. ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಜೀವನ್ ಕುಮಾರ್ ವಂದಿಸಿದರು. ದಯಾನಂ ಯು. ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆಯ ಬಳಿಕ ಬೈಂದೂರಿನ ಲಾವಣ್ಯ ತಂಡದಿಂದ ರಾಜೇಂದ್ರ ಕಾರಂತ್ ರಚನೆಯ ‘ಮುದ್ದಣ ಪ್ರಮೋಷನ್ ಪ್ರಸಂಗ’ ನಾಟಕ ಗಿರೀಶ್ ಬೈಂದೂರು ನಿರ್ದೇಶನದಲ್ಲಿ ಪ್ರಸ್ತುತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News