ಡಾ.ಎಂ.ಪ್ರಭಾಕರ ಜೋಶಿಗೆ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’

Update: 2020-02-24 16:33 GMT

ಉಡುಪಿ, ಫೆ.24: ಪ್ರಸಿದ್ಧ ವಿದ್ವಾಂಸ, ಯಕ್ಷಗಾನ ಅರ್ಥಧಾರಿ, ಲೇಖಕ ಹಾಗೂ ವಾಗ್ಮಿ ಮಂಗಳೂರಿನ ಡಾ. ಎಂ.ಪ್ರಭಾಕರ ಜೋಶಿ ಅವರು 2020ರ ಸಾಲಿನ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಖ್ಯಾತ ವಿದ್ವಾಂಸ ಪ್ರೊ. ವಿವೇಕ ರೈ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ನಿರ್ಣಯ ಕೈಗೊಂಡಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ.ಮುಳಿಯ ತಿಮ್ಮಪ್ಪಯ್ಯ ಅವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಡಾ.ಎಂ.ಪ್ರಭಾಕರ ಜೋಶಿ ಇವರಿಗೆ ಮಾ.7ರಂದು ಬೆಳಗ್ಗೆ 10:30ಕ್ಕೆ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗು ವುದು. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಶಾಂತಾರಾಮ ಭಾಗವಹಿಸಲಿದ್ದು, ಪ್ರೊ. ಎಂ.ಎಲ್. ಸಾಮಗ ಅಭಿನಂದನಾ ಭಾಷಣ ಮಾಡಲಿರುವರು. ಪ್ರಶಸ್ತಿ ಸಮಿತಿಯ ಸದಸ್ಯೆ ಮನೋರಮ ಎಂ. ಭಟ್ ಉಪಸ್ಥಿತರಿರುವರು.

ಸಾಹಿತ್ಯದಲ್ಲಿ ಅಪಾರ ಒಲವನ್ನು ಹೊಂದಿರುವ ಡಾ. ಜೋಶಿ, ಸಂಸ್ಕೃತಿ ಚಿಂತನೆ, ತತ್ತ್ವಶಾಸ್ತ್ರವನ್ನು ಒಳಗೊಂಡಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ, ಜಾಗರ, ಕೇದಗೆ ಮಾರುಮಾಲೆ, ಪ್ರಸ್ತುತ, ವಾಗಾರ್ಥ ಪದಕೋಶ, ವಾಗಾರ್ಥ ಯಕ್ಷಗಾನ ಪದಕೋಶ, ಮುಡಿ, ತಾಳಮದ್ದಳೆ ಪ್ರಮುಖವಾದುವು. ‘ಕೃಷ್ಣಸಂಧಾನ’ ಇವರ ಪಿಎಚ್‌ಡಿ ಪ್ರಬಂಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News