‘ಮಸೀದಿ, ಆಸ್ಪತ್ರೆ, ಗ್ರಂಥಾಲಯ ನಿರ್ಮಾಣ’: ಅಯೋಧ್ಯೆಯ ಭೂಮಿ ಸ್ವೀಕರಿಸಿ ಸುನ್ನಿ ವಕ್ಫ್ ಮಂಡಳಿ

Update: 2020-02-24 16:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ. 24: ಅಯೋಧ್ಯೆಯ ವಿವಾದಿತ ನಿವೇಶನದ ಬದಲಾಗಿ ಬೇರೆ ಸ್ಥಳದಲ್ಲಿ ಮಸೀದಿಗೆ ನೀಡಿದ ಐದು ಎಕರೆ ಭೂಮಿಯ ಕೊಡುಗೆಯನ್ನು ಸ್ವೀಕರಿಸಲಾಗುವುದು ಎಂದು ಸುನ್ನಿ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ಝಫರ್ ಫಾರೂಕಿ ಸೋಮವಾರ ಹೇಳಿದ್ದಾರೆ.

ಪ್ರಕರಣದ ದಾವೆದಾರರಲ್ಲಿ ಓರ್ವರಾಗಿರುವ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಐದು ಎಕರೆ ಭೂಮಿಯನ್ನು ನಿರ್ವಹಿಸಲು ಟ್ರಸ್ಟ್ ಒಂದನ್ನು ರೂಪಿಸಲು ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಉತ್ತರಪ್ರದೇಶ ಸರಕಾರ ಫೆಬ್ರವರಿ 5ರಂದು ಅಯೋಧ್ಯೆಯ ಸೋಹವಾಲ್ ಪ್ರದೇಶದಲ್ಲಿರುವ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿ ನೀಡಿದೆ.

ಸರಕಾರ ಭೂಮಿ ಮಂಜೂರು ಪತ್ರವನ್ನು ಈ ತಿಂಗಳ ಆರಂಭದಲ್ಲಿ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ನೀಡಿದೆ. ಸರಕಾರ ನೀಡಿದ ಈ ಭೂಮಿ ಜಿಲ್ಲಾ ಕೇಂದ್ರ ಕಚೇರಿಯಿಂದ 20 ಕಿ.ಮೀ. ದೂರದಲ್ಲಿರುವ ಅಯೋಧ್ಯೆ-ಲಕ್ನೋ ಹೆದ್ದಾರಿಯಲ್ಲಿದೆ.

ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಧನ್ನಿಪುರದಲ್ಲಿ ನೀಡಲಾದ ಐದು ಎಕರೆ ಭೂಮಿ ಸ್ವೀಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿವೇಶನದಲ್ಲಿ ಮಸೀದಿ, ಹಲವು ಶತಮಾನಗಳ ಇಂಡೊ-ಇಸ್ಲಾಮಿಕ್ ಸಂಸ್ಕೃತಿ ಪ್ರದರ್ಶಿಸುವ ಕೇಂದ್ರ, ಚಾರಿಟೆಬಲ್ ಆಸ್ಪತ್ರೆ, ಸಾರ್ವಜನಿಕ ಲೈಬ್ರೆರಿ ಹಾಗೂ ಇತರ ಸೌಲಭ್ಯಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಆದರೆ, ಮಸೀದಿಯ ಗಾತ್ರ ಹಾಗೂ ಅದು ಆಕ್ರಮಿಸಿಕೊಳ್ಳುವ ಪ್ರದೇಶದ ಬಗ್ಗೆ ಇದುವರೆಗೆ ನಿರ್ಧರಿಸಲ್ಲ ಎಂದು ಅವರು ಹೇಳಿದರು. ಝಫರ್ ಫಾರೂಕಿ ಅಲ್ಲದೆ ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಇತರ ಏಳು ಮಂದಿ ಸದಸ್ಯರು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News