ತಂದೆ-ಮಗ ನಾಪತ್ತೆ ಪ್ರಕರಣ: ಹೊರ ರಾಜ್ಯಗಳಲ್ಲೂ ಮುಂದುವರಿದ ಪೊಲೀಸ್ ತನಿಖೆ

Update: 2020-02-24 17:30 GMT

ಮಂಗಳೂರು, ಫೆ.24: ತಾಲೂಕಿನ ಪಾವೂರು ಗ್ರಾಮದಲ್ಲಿ ಫೆ.15ರಂದು ನಡೆದ ಕುಟುಂಬದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಮುಂಬೈಯಿಂದ ಬಂದಿದ್ದ ಗೋಪಾಲಕೃಷ್ಣ ರೈ (52) ಮತ್ತವರ ಪುತ್ರ ನಮೀಶ್ ರೈ(5) ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿ 10 ದಿನವಾದರೂ ಕೂಡ ಯಾವುದೇ ಸುಳಿವು ಲಭಿಸಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದರೂ ಕೂಡ ಪ್ರಯೋಜನವಾಗಿಲ್ಲ. ಪ್ರಕರಣ ದಿನದಿಂದ ದಿನಕ್ಕೆ ನಿಗೂಢತೆ ಸೃಷ್ಟಿಸುತ್ತಿದೆ.

ಗೋಪಾಲಕೃಷ್ಣ ರೈ ತನ್ನ ಪತ್ನಿಯ ಕುಟುಂಬವಾಗಿರುವ ಪಾವೂರಿನಲ್ಲಿ ನಡೆದಿದ್ದ ಪೈಚಿಲ್ ನೇಮಕ್ಕೆಂದು ಬಂದಿದ್ದರು. ಹಾಗೇ ಫೆ.15ರಂದು ರಾತ್ರಿ 2:30ಕ್ಕೆ ತನ್ನ ಪುತ್ರನೊಂದಿಗೆ ಮನೆಯಿಂದ ಹೊರಟಿದ್ದರು. ಮರುದಿನ ಮುಂಜಾನೆ ಅವರ ಕಾರು ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಅದರಂತೆ ನಾಪತ್ತೆಯಾದ ಬಗ್ಗೆ ಕೊಣಾಜೆ ಮತ್ತು ಕಾರು ಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದರಿಂದ ಇಬ್ಬರೂ ನೇತ್ರಾವತಿ ನದಿಗೆ ಹಾರಿರಬಹುದು ಎನ್ನುವ ಸಂಶಯ ವ್ಯಕ್ತವಾಗಿತ್ತು. ಅದರ ಆಧಾರದಲ್ಲಿ ನದಿಯಲ್ಲಿ ಎರಡು ದಿನದವರೆಗೆ ಹುಡುಕಾಟ ನಡೆಸಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲ. ಸಾಮಾನ್ಯವಾಗಿ ನದಿಗೆ ಹಾರಿದರೆ ಮೃತದೇಹ 24 ಗಂಟೆಯಲ್ಲೇ ಮೇಲೇರುತ್ತದೆ. ಆದರೆ ನದಿಗೆ ಹಾರಿದ್ದಾರೆ ಎನ್ನಲಾದ ತಂದೆ ಮತ್ತು ಮಗನ ವಿಷಯದಲ್ಲಿ ಯಾವ ಬೆಳೆವಣಿಗೆಯೂ ಆಗಿರಲಿಲ್ಲ. ಇದರಿಂದಾಗಿ ಅವರು ನದಿಗೆ ಹಾರಿರುವ ಸಾಧ್ಯತೆಗಳು ಕ್ಷೀಣಿಸಿದೆ ಎನ್ನಲಾಗುತ್ತಿದೆ.

ಆದರೆ ಅವರ ಕಾರಿನಲ್ಲಿ ಪತ್ತೆಯಾದ ಎಂಟು ಪುಟಗಳ ಡೆತ್‌ನೋಟ್‌ನಲ್ಲಿ ತನ್ನ ಪತ್ನಿ ಮತ್ತು ಮಗನ ವಯಸ್ಸಿನ ಅಂತರದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಮಗ ತನ್ನನ್ನು ಅತಿಯಾಗಿ ನೆಚ್ಚಿಕೊಂಡಿದ್ದು, ಆ ಕಾರಣಕ್ಕೆ ನಾನು ಆತನನ್ನು ಜೊತೆಯಲ್ಲೇ ಕರೆದೊಯ್ಯುತ್ತಿದ್ದೇನೆ. ನಾನೊಬ್ಬನೇ ಹೋದರೆ ಮಗನಿಗೆ ತಂದೆ ಇಲ್ಲ ಎನ್ನುವ ಕೊರಗು ಕಾಡಬಹುದು. ನೀನು ಮುಂದಿನ ಜೀವನವನ್ನು ಸಾಗಿಸು ಎಂದು ಆ ಪತ್ರದಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಒಂದು ವಾರದಿಂದ ಈ ಪ್ರಕರಣ ನಿಗೂಢವಾಗಿ ಉಳಿದಿದ್ದು, ಕುಟುಂಬಸ್ಥರು ಮಾತ್ರವಲ್ಲದೆ ಪೊಲೀಸ್ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಪೊಲೀಸರು ಮುಂಬೈ, ಕೇರಳ, ಪುಣೆ ಮುಂತಾದ ಭಾಗಗಳಿಗೆ ತೆರಳಿ ತನಿಖೆಯನ್ನು ನಡೆಸಿದ್ದಾರೆ. ಕುಟುಂಬಸ್ಥರು, ಆಪ್ತರ ತನಿಖೆಯನ್ನೂ ನಡೆಸಿದ್ದಾರೆ ಎನ್ನಲಾಗಿದ್ದು, ಕಿಂಚಿತ್ ಸುಳಿವೂ ಸಿಗದಿರುವುದು ಪ್ರಕರಣವನ್ನು ಇನ್ನಷ್ಟು ಕುತೂಹಲಕ್ಕೆ ಕೊಂಡೊಯ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News