ಫೆ.29ರಂದು ಉಡುಪಿ ಜಿಲ್ಲಾ ಗಮಕ ಸಮ್ಮೇಳನ

Update: 2020-02-25 13:57 GMT

ಉಡುಪಿ, ಫೆ.25: ಕರ್ನಾಟಕ ಗಮಕ ಕಲಾ ಪರಿಷತ್ ಮತ್ತು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ವತಿಯಿಂದ ಉಡುಪಿ ಜಿಲ್ಲಾ ಗಮಕ ಸಮ್ಮೇಳನವನ್ನು ಫೆ.29ರಂದು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ವಿಭುದೇಶ ತೀರ್ಥ ಸಭಾಂಗಣದ ಹಂದಾಡಿ ಅನಂತಪದ್ಮನಾಭ ಭಟ್ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ಈ ಸಮ್ಮೇಳನದ ಅಧ್ಯಕ್ಷರಾಗಿ ಗಮಕಿ ಸುಗಮ ಸಂಗೀತ ಗಾಯಕ ಚಂದ್ರ ಶೇಖರ್ ಕೆದ್ಲಾಯ ಬ್ರಹ್ಮಾವರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್‌ನ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬೆಳಗ್ಗೆ 9ಗಂಟೆಗೆ ಸಮ್ಮೇಳನವನ್ನು ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಡಾ.ವಾಸು ದೇವ ಎಚ್.ಆರ್.ಹೊಸಹಳ್ಳಿ ಶಿಖರೋಪನ್ಯಾಸ ಮಾಡಲಿರುವರು. ಸಂಜೆ 4:30ಕ್ಕೆ ಮಾಹೆ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹರಿಕೃಷ್ಣ ಪುನರೂರು, ಡಾ.ಜಿ. ಶಂಕರ್, ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿರುವರು.

ಕುಮಾರವ್ಯಾಸ ಭಾರತದ ‘ಕರ್ಣಬೇಧ’ ಮತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯ ಗಮಕ ವಾಚನ ವ್ಯಾಖ್ಯಾನ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಶಿಕ್ಷಕಿಯರಿಗೆ ಅನ್ಯಕಾರ್ಯನಿಮಿತ್ತ ಸೌಲಭ್ಯವನ್ನು ನೀಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷೆ ಯಾಮಿನಿ ಭಟ್, ಉಪಾಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಸದಸ್ಯರಾದ ಕೃಷ್ಣಮೂರ್ತಿ, ಆಶಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News