ಶಸ್ತ್ರ ಮಾರಾಟದ ಬದಲು, ಹವಾಮಾನಕ್ಕಾಗಿ ಅಮೆರಿಕ ಭಾರತದ ಜೊತೆ ಕೈಜೋಡಿಸಲಿ

Update: 2020-02-25 14:18 GMT

ವಾಶಿಂಗ್ಟನ್, ಫೆ. 25: ಭಾರತ ಪ್ರವಾಸದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವಂತೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಯುಧಗಳನ್ನು ಮಾರಾಟ ಮಾಡುವ ಬದಲು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಮೆರಿಕ ಭಾರತದ ಜೊತೆ ಕೈಜೋಡಿಸಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಮುಂಚೂಣಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಸೆನೆಟರ್ ಬರ್ನೀ ಸ್ಯಾಂಡರ್ಸ್ ಮಂಗಳವಾರ ಹೇಳಿದ್ದಾರೆ.

‘‘ರೇತಿಯಾನ್, ಬೋಯಿಂಗ್ ಮತ್ತು ಲಾಕ್‌ಹೀಡ್ ಕಂಪೆನಿಗಳ ಶ್ರೀಮಂತಿಕೆಯನ್ನು ಹೆಚ್ಚಿಸಲು ಮೂರು ಬಿಲಿಯ ಡಾಲರ್ (ಸುಮಾರು 21,500 ಕೋಟಿ ರೂಪಾಯಿ) ಮೌಲ್ಯದ ಆಯುಧಗಳನ್ನು ಭಾರತಕ್ಕೆ ಮಾರಾಟ ಮಾಡುವ ಬದಲು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಮೆರಿಕ ಆ ದೇಶದ ಜೊತೆ ಕೈಜೋಡಿಸಬೇಕು. ವಾಯುಮಾಲಿನ್ಯವನ್ನು ಕಡಿಮೆ ಮಾಡಲು, ಉತ್ತಮ ನವೀಕರಣಗೊಳಿಸಬಹುದಾದ ಇಂಧನ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ನಮ್ಮ ಗ್ರಹವನ್ನು ಕಾಪಾಡಲು ನಾವು ಜೊತೆಯಾಗಿ ಕೆಲಸ ಮಾಡಬಬಹುದಾಗಿದೆ’’ ಎಂದು ಸ್ಯಾಂಡರ್ಸ್ ಟ್ವೀಟ್ ಮಾಡಿದ್ದಾರೆ.

78 ವರ್ಷದ ಬರ್ನೀ ಸ್ಯಾಂಡರ್ಸ್, ಟ್ರಂಪ್‌ರ ಕಟು ಟೀಕಾಕಾರರ ಪೈಕಿ ಓರ್ವರಾಗಿದ್ದಾರೆ. ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿರುವ ಟ್ರಂಪ್‌ಗೆ ಸವಾಲು ಒಡ್ಡುವ ಸಾಧ್ಯತೆ ಇದೆ.

ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯ ಪಾತ್ರ ವಹಿಸಿದ್ದರೆ, ಹವಾಮಾನ ಬದಲಾವಣೆ ಎನ್ನುವುದೇ ಸುಳ್ಳು ಎಂದು ಟ್ರಂಪ್ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News