ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಕುದ್ರೋಳಿಯಲ್ಲಿ ಬೃಹತ್ ಪ್ರತಿಭಟನೆ

Update: 2020-02-25 15:10 GMT

ಮಂಗಳೂರು, ಫೆ. 25: ಭಾರತದ ಮೂಲನಿವಾಸಿಗಳಿವೆ ಸಹಿಷ್ಣು ಶಕ್ತಿಯಿದೆ. ಆದರೆ ಧರ್ಮಕ್ಕಾಗಿ ಕೊಲ್ಲುವುದನ್ನು ಪಿಶಾಚಿ ಗುಣ ಎನ್ನುತ್ತಾರೆ. ಅದು ದೇಶದಲ್ಲಿ ಶೇ.2ರಷ್ಟು ಜನಸಂಖ್ಯೆಯ ಬ್ರಾಹ್ಮಣರಲ್ಲಿ ಅಧಿಕ ಪ್ರಮಾಣದಲ್ಲಿದೆ ಎಂದು ಆರೆಸ್ಸೆಸ್‌ನ ಮಾಜಿ ಮುಖಂಡ, ಪ್ರಗತಿಪರ ಚಿಂತಕ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧದ ಪ್ರತಿಭಟನೆಯಲ್ಲಿ ಹುತಾತ್ಮರಾದ ನೌಶೀನ್ ಮತ್ತು ಅಬ್ದುಲ್ ಜಲೀಲ್ ಅವರ ಹುಟ್ಟೂರು ಕುದ್ರೋಳಿಯ ಟಿಪ್ಪುಸುಲ್ತಾನ್ ಗಾರ್ಡನ್‌ನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹಿಂಧೂ ಧರ್ಮಕ್ಕೆ ತನ್ನದೇ ಆದ ಶಾಂತಿ-ಸಹೋದರತೆ ಇದೆ. ಹಿಂಧೂ ಧರ್ಮವು ಸಿಂಧೂ ನಾಗರಿಕತೆಯಿಂದ ಹುಟ್ಟಿಕೊಂಡಿದೆಯೇ ಹೊರತು, ಹಿಂದುತ್ವದಿಂದಲ್ಲ. ಜೈ ಹಿಂದ್ ಘೋಷಣೆಯು ಯಾವುದೋ ಮೇಲ್ವರ್ಗದ ಧರ್ಮಕ್ಕೆ ಜೈಕಾರ ಕೂಗುವುದಲ್ಲ. ಅದು ಈ ಮಣ್ಣಿನ ಗುಣವಾಗಿದೆ. ದೇಶದ ಅಸ್ಮಿತೆಯಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಂಥವರಿಂದ ದೇಶದಲ್ಲಿ ದೊಡ್ಡ ಡ್ರಾಮಾ ನಡೆಯುತ್ತಿದೆ. ದೇಶದ ಜನತೆಗೆ ದಾಖಲೆ ಕೇಳುವ ಅವರು ಮೊದಲು ತಮ್ಮ ಶಿಕ್ಷಣದ ಬಗ್ಗೆ ದಾಖಲೆ ಹಾಜರುಪಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಶೂದ್ರ ವರ್ಗದ ಬಿಲ್ಲವರಿಗೆ ಒಬ್ಬನೂ ಎಂಪಿಗಳಿಲ್ಲ. ಆದರೆ ಅತಿ ಕಡಿಮೆ ಸಂಖ್ಯೆಯ ಬ್ರಾಹ್ಮಣರೇ ಹೆಚ್ಚು ಸ್ಥಾನಗಳಲ್ಲಿ ರಾರಾಜಿಸುತ್ತಿದ್ದಾರೆ. ಬಿಲ್ಲವರು ಆರೆಸ್ಸೆಸ್, ಸಂಘಪರಿವಾರ ಸೇರಿದ ಬಳಿಕ ರಾಜಕೀಯ ಅಸ್ತಿತ್ವವೇ ಕಳೆದುಕೊಂಡಿದ್ದಾರೆ. ಆರೆಸ್ಸೆಸ್‌ನಲ್ಲಿ 20 ವರ್ಷ ಇದ್ದು ಬಂದವನು ನಾನು, ಅಲ್ಲಿನ ಕ್ರೌರ್ಯತೆಯ ಪರಿಚಯವಿದೆ ಎಂದರು.

ಸಿಎಎ, ಎನ್‌ಆರ್‌ಸಿ ಬಗ್ಗೆ ನಡೆಸುತ್ತಿರುವ ಪ್ರತಿಭಟನೆಗಳು ಸಾಕು. ಇನ್ನು ಮುಂದಿನ ದಿನಗಳಲ್ಲಿ ಸಿಎಎ ಬಗ್ಗೆ ಮನೆಮನೆಗೂ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಸತ್ಯಕ್ಕೆ ವಿರುದ್ಧವಾಗಿ ಪ್ರಕಟಿಸುವ, ಪ್ರಸಾರ ಮಾಡುವ ಮಾಧ್ಯಮಗಳಿಂದ ದೂರ ಇರಬೇಕು. ಅಂತಹ ಚಾನೆಲ್‌ಗಳನ್ನು ವೀಕ್ಷಿಸುವುದನ್ನೇ ಬಿಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ, ಸಾಹಿತಿ ಎ.ಕೆ.ಕುಕ್ಕಿಲ ಮಾತನಾಡಿ, ಸಿಎಎ ವಿರುದ್ಧ ದೇಶದಲ್ಲಿ ಸಾವಿರಾರು ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಗಳ ವಿರುದ್ಧ ದಾಳಿ ನಡೆಸುತ್ತಿರುವುದು ಹೆಚ್ಚುತ್ತಿದೆ. ಸಿಎಎ ಪರವಾಗಿಯೇ ಸುಪ್ರೀಂಕೋರ್ಟ್‌ನಿಂದ ತೀರ್ಪು ಬರುವ ಸಾಧ್ಯತೆ ಇದೆ. ಹಾಗಾಗಿ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸಿಎಎ ಬಗ್ಗೆ ಜನಜಾಗೃತಿ ಮೂಡಿಸಬೇಕು. ಪ್ರತಿಭಟನೆಯ ಬದಲು ಅಭಿಯಾನ, ಶಿಬಿರ, ಆಂದೋಲನಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ವುಮೆನ್ಸ್ ಇಂಡಿಯ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ಲೀಮ ಮಾತನಾಡಿ, ಮಂಗಳೂರು ಗೋಲಿಬಾರ್ ಪ್ರಕರಣವು ನ್ಯಾಯಾಂಗ ತನಿಖೆಯಾಗಲು ಹಲವು ಮಹಿಳೆಯರು ಪೊಲೀಸರ ವಿರುದ್ಧ ಸಾಕ್ಷಿಗಳನ್ನು ನುಡಿದಿದ್ದಾರೆ. ಕಾನೂನಿನ ಕುಣಿಕೆ ಪೊಲೀಸರ ಕುತ್ತಿಗೆಗೆ ಬೀಳುವುದು ನಿಶ್ಚಿತ. ಕಮಿಷನರ್ ಹರ್ಷ, ಇನ್‌ಸ್ಪೆಕ್ಟರ್‌ಗಳಾದ ಶಾಂತಾರಾಮ್ ಕುಂದರ್, ಶರೀಫ್ ಅವರ ಹೇಳಿಕೆಗಳ ಪೂರ್ವಯೋಜಿತ ಕೃತ್ಯ ಎಂದು ಹೇಳಿದರು.

ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಮಾತನಾಡಿ, ಸಿಎಎ ವಿರುದ್ಧದ ಹೋರಾಟಗಳು ರಚನಾತ್ಮಕವಾಗಿ ಇರಬೇಕು. ಯೋಜನಾಬದ್ಧ, ರಚನಾತ್ಮಕ ಹೋರಾಟಗಳಿಂದ ಸಾಫಲ್ಯತೆ ಸಿಗಲಿದೆ. ಮುಸ್ಲಿಮರ ಹೊರತು ದೇಶವಿಲ್ಲ. ಎಪ್ರಿಲ್ 1ಕ್ಕೆ ಎನ್‌ಪಿಆರ್ ಪ್ರಕ್ರಿಯೆ ಚಾಲನೆಗೊಳ್ಳಲಿದೆ. ಅದಕ್ಕಿಂತ ಮೊದಲೇ ದೇಶದ ಜನತೆ ಸಂಪೂರ್ಣ ಜಾಗೃತಿಗೊಳ್ಳಬೇಕು. ಯಾವುದೇ ಕಾರಣಕ್ಕೂ ದಾಖಲೆ ನೀಡಬಾರದು ಎಂದರು.

ಎಸ್‌ಡಿಪಿಐ ಮುಖಂಡ ಇಲ್ಯಾಸ್ ತುಂಬೆ ಮಾತನಾಡಿ, ಮಂಗಳೂರಿನ ಪೊಲೀಸರು ಜನರನ್ನು ಜನರನ್ನಾಗಿ ನೋಡದೆ, ಹಿಂದೂ- ಮುಸ್ಲಿಮರು ಎಂಬಂತೆ ನೋಡುತ್ತಿದ್ದಾರೆ. ಕಲ್ಲಡ್ಕ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಏಕೆ ದೇಶದ್ರೋಹದ ಕೇಸು ಹಾಕಿಲ್ಲ. ಇದಕ್ಕೆ ಪೊಲೀಸ್ ಇಲಾಖೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಮಂಗಳೂರು ಗಲಭೆ ವೇಳೆ ಕೇರಳದಿಂದ ಜನರು ಆಗಮಿಸಿದ್ದಾರೆ ಎಂದು ಹೇಳಿದವರು ಈ ಕುರಿತು ದಾಖಲೆ ತೋರಿಸಲಿ ಎಂದರು.

ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಹಿಂದೂ ಸಮಾಜದ ಒಳಿತಿಗಾಗಿ ಪೌರತ್ವ ಕಾಯ್ದೆಗಳನ್ನು ತರುತ್ತಿಲ್ಲ. ಈ ಕಾನೂನು ಜಾರಿಗೊಳಿಸಿ ದೇಶದ ಮುಸಲ್ಮಾನರನ್ನು ಓಡಿಸಲೂ ಸಾಧ್ಯವಿಲ್ಲ. ಹಿಂದೂ- ಮುಸ್ಲಿಮರ ನಡುವೆ ಗೋಡೆ ಕಟ್ಟುವ ಏಕೈಕ ಉದ್ದೇಶದಿಂದ ತಂದ ಕಾಯ್ದೆ ಇದು. ಇಂಥ ಧರ್ಮಾಧಾರಿತ ಗೋಡೆ ಕಟ್ಟಲು ನಾವು ಎಂದಿಗೂ ಬಿಡಲ್ಲ ಎಂದು ಹೇಳಿದರು.

ಮಂಗಳೂರು ಗೋಲಿಬಾರ್‌ನಲ್ಲಿ ಇಬ್ಬರ ಸಾವಿಗೆ ಕಾರಣರಾದ ಪೊಲೀಸ್ ಕಮೀಷನರ್ ಹರ್ಷ ಅವರನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಅದೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ. ಇಂಥ ಜನಪ್ರತಿನಿಧಿಗಳಿಂದ ಯಾವ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯ ಎಂದು ಸುಧೀರ್ ಕುಮಾರ್ ಮುರೊಳ್ಳಿ ಪ್ರಶ್ನಿಸಿದರು.

ಜಲೀಲ್ ಮಗಳು ಐಪಿಎಸ್ ಪರೀಕ್ಷೆ ಬರೆಯಲಿ: ರಾ ಚಿಂತನ್ 

ಮೀನು ಕಾರ್ಮಿಕ ಅಬ್ದುಲ್ ಜಲೀಲ್, ನೌಶಿನ್‌ನಂತಹ ಅಮಾಯಕರನ್ನು ಗೋಲಿಬಾರ್‌ನಲ್ಲಿ ಕೊಲ್ಲಲಾಯಿತು. ಜಲೀಲ್ ಮಗಳು ಐಪಿಎಸ್ ಪರೀಕ್ಷೆ ಬರೆದು ಮುಂದಿನ 20 ವರ್ಷದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕವಾಗಬೇಕು. ಅಲ್ಲಿಯವರೆಗೂ ಆಕೆಯ ಶಿಕ್ಷಣಕ್ಕೆ ಆರ್ಥಿಕವಾಗಿ ಬೆನ್ನಿಗೆ ನಿಲ್ಲಲಿದ್ದೇನೆ ಎಂದು ಪತ್ರಕರ್ತ, ಯುವ ಚಿಂತಕ ರಾ ಚಿಂತನ್ ಹೇಳಿದರು.

ಮುಸ್ಲಿಮರು ಗುಜರಿ ಅಂಗಡಿಗೆ ಸೀಮಿತವಾಗಬಾರದು. ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹಿಸಬೇಕು. ಪಂಕ್ಚರ್ ಹಾಕುವವರು ಪ್ರತಿಭಟನೆ ಮಾಡುತ್ತಾರೆ ಎನ್ನುವವರ ವಿರುದ್ಧ ಮುಸ್ಲಿಂಮರು ದೂರದೃಷ್ಟಿಯ ಹೋರಾಟ ಮಾಡಬೇಕು. ದೇಶದಲ್ಲಿ ಶೇ.17ರಷ್ಟಿರುವ ಮುಸ್ಲಿಮರು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯುವ ಮೂಲಕ ಸಂಘಪರಿವಾರಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕ ಯು.ಟಿ. ಖಾದರ್,  ಎಚ್.ಐ.ಸುಫಿಯಾನ್ ಸಖಾಫಿ ಕಾವಳಕಟ್ಟೆ, ಕೆ.ಎಂ. ಇಕ್ಬಾಲ್ ಬಾಳಿಲ, ಎಂ.ಜಿ. ಮುಹಮ್ಮದ್ ಮಂಗಳೂರು, ಎಸ್‌ಡಿಪಿಐ ಮುಖಂಡ ಇಲ್ಯಾಸ್ ತುಂಬೆ, ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷರೂ ಆದ ಮಾಜಿ ಮೇಯರ್ ಕೆ.ಅಶ್ರಫ್, ಕಾರ್ಯದರ್ಶಿ ಎಂ.ಅಬ್ದುಲ್ ಅಝೀಝ್ ಕುದ್ರೋಳಿ, ಉಪಾಧ್ಯಕ್ಷರಾದ ಫಝಲ್ ಮುಹಮ್ಮದ್ ನಡುಪಳ್ಳಿ, ನಾಸಿರುದ್ದೀನ್ ಹೈಕೊ, ಸಂಶುದ್ದೀನ್ ಎಚ್.ಟಿ., ಮನಪಾ ಕಾರ್ಪೊರೇಟರ್‌ಗಳಾದ ಅಬ್ದುಲ್ ರವೂಫ್, ಮುನೀಬ್ ಬೆಂಗರೆ, ಅಶ್ರಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯ ಉಪಾಧ್ಯಕ್ಷ ಬಿ.ಅಬೂಬಕರ್ ಸ್ವಾಗತಿಸಿದರು. ನೌಫಲ್ ವಿಟ್ಲ, ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News