ಉಡುಪಿ: ಚಿನ್ನದ ಪಲ್ಲಕ್ಕಿ ಬಪ್ಪನಾಡು ದೇವಸ್ಥಾನಕ್ಕೆ ಹಸ್ತಾಂತರ

Update: 2020-02-25 16:41 GMT

 ಉಡುಪಿ, ಫೆ.25: ಉಡುಪಿಯ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ನಲ್ಲಿ 11 ಕಿ.ಗ್ರಾಂ ಚಿನ್ನದಿಂದ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಚಿನ್ನದ ಪಲ್ಲಕ್ಕಿಯನ್ನು ಇಂದು ಮುಂಜಾನೆ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಪ್ಪನಾಡು ದೇವಸ್ಥಾನದ ಆನುವಂಶಿಕ ವ್ಯವಸ್ಥಾಪಕ ಟ್ರಸ್ಟಿ ಎನ್.ಎಸ್.ಮನೋಹರ ಶೆಟ್ಟಿ, ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಕಾರ್ಯಕಾರಿ ಅಧ್ಯಕ್ಷ ಶೇಖರ್ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೇಂಕಟೇಶ್, ಕಾರ್ಯನಿರ್ವಾಹಕ ಅದಿಕಾರಿ ಜಯಮ್ಮ, ಸ್ವರ್ಣ ಪಲ್ಲಕ್ಕಿಯ ಸಂಚಾಲಕ ಅತುಲ್ ಕುಡ್ವಾ, ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ನ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ನಿರ್ದೇಶಕ ಗುಜ್ಜಾಡಿ ರಾಮದಾಸ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

ಚಿನ್ನದ ಪಲ್ಲಕ್ಕಿಯನ್ನು 11 ಕೆ.ಜಿ. 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಎಲ್ಲಾ ಭಾಗಗಳನ್ನು ಅದರ ಶುದ್ಧತೆಯ ದೃಢೀಕರಣಕ್ಕಾಗಿ ಬಿಐಎಸ್ ಹಾಲ್‌ಮಾರ್ಕ್ ಮಾಡಲಾಗಿದೆ. ಪಲ್ಲಕ್ಕಿಯ ತೂಕವನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ದೇವಸ್ಥಾನದ ಪದಾಧಿಕಾರಿಗಳು ಅನುಮೋದಿಸಿದ್ದಾರೆ ಎಂದು ಗುಜ್ಜಾಡಿ ರಾಮದಾಸ ನಾಯಕ್ ತಿಳಿಸಿದರು.

 ಅತ್ಯಂತ ಆಕರ್ಷಕವಾಗಿ ಕಲಾತ್ಮಕವಾಗಿ ನಿರ್ಮಾಣಗೊಂಡ ಈ ಚಿನ್ನದ ಪಲ್ಲಕ್ಕಿಯ ನಿರ್ಮಾಣಕ್ಕೆ ಸುಮಾರು ಒಂದೂವರೆ ತಿಂಗಳು ತಗಲಿದ್ದು, 550 ಮಾನವ ದಿನಗಳನ್ನು ಬಳಸಿ ತಯಾರಿಸಲಾಗಿದೆ ಎಂದು ಅವರು ವಿವರಿಸಿದರು. 

ಇದಕ್ಕೆ ಬಳಸಿದ ಚಿನ್ನವನ್ನು ದೇವಿಯ ಭಕ್ತರು ಸೇವಾ ರೂಪದಲ್ಲಿ ನೀಡಿದ್ದರು. ಪಲ್ಲಕ್ಕಿಯನ್ನು ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ನ ಕೆಳಾರ್ಕಳ ಬೆಟ್ಟಿನಲ್ಲಿರುವ ಆಭರಣ ತಯಾರಿಕಾ ಘಟಕ ‘ಸ್ವರ್ಣೋದ್ಯಮ’ದಲ್ಲಿ ನಿರ್ಮಿಸಲಾಗಿದೆ. ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ನ ಎಲ್ಲಾ ಆಭರಣಗಳನ್ನು ಇಲ್ಲೇ ತಯಾರಿಸಲಾಗುತ್ತದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ರಾಮದಾಸ ನಾಯಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News