ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಯ ಬಂಧನ

Update: 2020-02-25 17:45 GMT

ಉಳ್ಳಾಲ:  ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಶಾಲೆಗೆ ಬಿಟ್ಟು ಬರುವ ನೆಪದಲ್ಲಿ ಕರೆದುಕೊಂಡು ಹೋಗಿ ಕಳೆದ ಒಂದು ತಿಂಗಳಿನಿಂದ ನಿರಂತರ ಅತ್ಯಾಚಾರಗೈದ ಆರೋಪಿಯನ್ನು ಪೋಕ್ಸೊ ಕಾಯ್ದೆಯಡಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪಂಡಿತ್ ಹೌಸ್ ಶಿವಾಜಿನಗರ ನಿವಾಸಿ ಥೋಮಸ್ ಕೊರಿಯ (60) ಎಂದು ಗುರುತಿಸಲಾಗಿದೆ.

ಸಂತ್ರಸ್ತೆಯ ಮನೆಯವರೊಂದಿಗೆ ಕಳೆದ ಒಂದೂವರೆ ವರ್ಷಗಳಿಂದ ಆರೋಪಿ ಥೋಮಸ್ ಆತ್ಮೀಯತೆಯಿಂದ ಇದ್ದ ಎನ್ನಲಾಗಿದೆ. ಈತ ಪಂಡಿತ್ ಹೌಸ್ ಜಂಕ್ಷನ್ ನಲ್ಲಿ ಸಂಜೆ ಟೆಂಪೊ ಒಂದರಲ್ಲಿ ಮೊಬೈಲ್ ಕ್ಯಾಂಟೀನ್ ವ್ಯವಹಾರ ನಡೆಸುತ್ತಿದ್ದು, ಹಗಲು ಹೊತ್ತಲ್ಲಿ ಸಂತ್ರಸ್ತೆಯ ತಾಯಿಯ ಕ್ಯಾಂಟಿನ್ ಕೆಲಸದಲ್ಲಿ ನಿರತನಾಗುತ್ತಿದ್ದ ಎನ್ನಲಾಗಿದೆ. ಸಂತ್ರಸ್ತೆಯನ್ನು  ಸ್ಥಳೀಯ ಶಾಲೆಗೆ ಆರೋಪಿಯು ನಿತ್ಯವೂ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಶಾಲೆಯ ನೆಪದಲ್ಲಿ ಶಾಲೆಯ ಪಕ್ಕದ ರಬ್ಬರ್ ತೋಪಿಗೆ ಕರೆದುಕೊಂಡು ಹೋಗಿ ಬಳಿಕ ಶಾಲೆಗೆ ಬಿಡುತ್ತಿದ್ದ ಎನ್ನಲಾಗಿದೆ. ಈ ವಿಚಾರ ಕಳೆದ ಮೂರು ದಿನಗಳ ಹಿಂದೆ ಸ್ಥಳೀಯ ಯುವಕರ ಗಮನಕ್ಕೆ ಬಂದಿತ್ತು.  ಮಂಗಳವಾರ ಬೆಳಗ್ಗೆ ರಬ್ಬರ್ ತೋಪಿನಲ್ಲಿ ಆರೋಪಿ ಅತ್ಯಾಚಾರವೆಸಗಲು ಸಿದ್ಧತೆ ನಡೆಸುತ್ತಿದ್ದ  ಸಂದರ್ಭ ಯುವಕರ ಕೈಗೆ ಸಿಕ್ಕಿ ಬಿದ್ದಿದ್ದು ಯುವಕರು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯನ್ನು ವಿಚಾರಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News