ತಲಪಾಡಿ ಲಾಸ್ಟ್ ಸ್ಟಾಪ್ ವಿವಾದ: ಟೋಲ್ ಗೇಟ್ ಮುಂದೆ ಬಸ್ ಸಿಬ್ಬಂದಿ ಪ್ರತಿಭಟನೆ

Update: 2020-02-26 18:22 GMT

ಉಳ್ಳಾಲ, ಫೆ.26: ಟೋಲ್ ಬೂತ್ ತಲಪಾಡಿ ಸಿಟಿ ಬಸ್‌ಗಳಿಗೆ ನಿಗದಿಪಡಿಸಿದ ದರ ಪಾವತಿಸುವುದನ್ನು ವಿರೋಧಿಸಿ ಕಳೆದ ಒಂದೂವರೆ ತಿಂಗಳಿನಿಂದ ತಲಪಾಡಿ ಟೋಲ್ ಎದುರುಗಡೆಯೇ ಬಸ್‌ಗೆ ಕೊನೆಯ ಸ್ಟಾಪ್ ನೀಡಿ ವಾಪಸ್ ಆಗುತ್ತಿದೆ. ಇದರಿಂದ ತೊಂದರೆಗೀಡಾದ ಪ್ರಯಾಣಿಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿ ಬಸ್‌ಗಳನ್ನು ಗೇಟಿಗೆ ಅಡ್ಡವಾಗಿಟ್ಟು ಪ್ರತಿಭಟಿಸಿದ ಘಟನೆ ತಲಪಾಡಿ ಟೋಲ್ ಗೇಟ್ ಬಳಿ ನಡೆಯಿತು.

ಪರಿಸ್ಥಿತಿಯನ್ನು ಹತೋಟಿಗೆ ತರಲು ಉಳ್ಳಾಲ ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಲಘು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಯಿತು.

ಉದ್ರಿಕ್ತ ಗುಂಪು ಟೋಲ್ ಸಿಬ್ಬಂದಿ ಜೊತೆಗೆ ಪಟ್ಟುಬಿಡದೆ ನಿಂತಾಗ, ಫೆ.29ರಂದು ಜಿಲ್ಲಾಧಿಕಾರಿ, ಸಂಸದರು, ಟೋಲ್ ಅಧಿಕಾರಿಗಳನ್ನು ಜತೆಗೆ ಸೇರಿಸಿಕೊಂಡು ತುರ್ತು ಸಭೆ ನಡೆಸುವ ಕುರಿತು ಮನವಿ ಮಾಡುವುದಾಗಿ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ ಹೇಳಿದ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News