ರಾಣಿ ಅಬ್ಬಕ್ಕ ನಮ್ಮ ಹೆಮ್ಮೆ: ಸಿಂಧೂ ರೂಪೇಶ್

Update: 2020-02-27 08:32 GMT

ಮಂಗಳೂರು, ಫೆ. 27: ದೇಶದಲ್ಲೇ ಮೊದಲ ಬಾರಿಗೆ ವಿದೇಶೀಯರ ವಿರುದ್ಧ ಹೋರಾಟ ನಡೆಸಿದ ಕೀರ್ತಿ ರಾಣಿಅಬ್ಬಕ್ಕರಿಗೆ ಸಲ್ಲುತ್ತದೆ. ಇದು ನಮ್ಮ ಹೆಮ್ಮೆಯಾಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅಭಿಪ್ರಾಯಿಸಿದ್ದಾರೆ. ವೀರರಾಣಿ ಅಬ್ಬಕ್ಕ ಉ್ಸತವ ಪೂರ್ವಭಾವಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಣಿ ಅಬ್ಬಕ್ಕ ವಿಚಾರಗೋಷ್ಠಿ-ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾವು ಇತಿಹಾಸವನ್ನು ಅರಿತು ಅದರಲ್ಲಿನ ಉತ್ತಮ ಅಂಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಸಮಾಜದ ಜತೆಗೆ ನಾವೂ ಪ್ರಗತಿ ಹೊಂದಲು ಸಾಧ್ಯ ಎಂದ ಅವರು, ರಾಣಿ ಅಬ್ಬಕ್ಕನ ಧೈರ್ಯ, ಪೂರ್ಚುಗೀಸರ ವಿರುದ್ಧದ ಹೋರಾಟ, ತನ್ನ ಸಾಮ್ರಾಜ್ಯವನ್ನು ಕಾಪಾಡಿದ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಮಟ್ಟದಲ್ಲೇ ತಿಳಿಸಿ, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಬಗೆಗಿನ ವಿಚಾರಗಳು ವಿದ್ಯಾರ್ಥಿಗಳಿಗೆ ತಾನಾಗಿಯೇ ಸಿಗುತ್ತಿತ್ತು. ಆದರೆ ಈಗಿನವರಿಗೆ ದೇಶದ ಪ್ರೇಮದ ಕುರಿತು ಪ್ರತ್ಯೇಕವಾಗಿ ತಿಳಿಹೇಳಬೇಕಾದ ಅವಶ್ಯಕತೆಯಿದೆ ಎಂದರು.

ಜಿಪಂ ಸಿಇಒ ಡಾ.ಸೆಲ್ವಮಣಿ ಆರ್.ಅಧ್ಯಕ್ಷತೆ ವಹಿಸಿದ್ದರು.

ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಕೊಟ್ರೇಶ್, ವಿವಿ ಕಾಲೇಜು ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ. ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ‘ತುಳುನಾಡಿನ ರಾಣಿಯರು’ ವಿಷಯವಾಗಿ ವಿಚಾರಗೋಷ್ಠಿ ನೆರವೇರಿತು. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪತಿ ಭಟ್, ಕರಿಮೆಣಸಿನ ರಾಣಿ ಚೆನ್ನಬೈರಾದೇವಿ ವಿಷಯದಲ್ಲಿ, ಸಂತ ಅಲೋಶಿಯಸ್ ಕಾಲೇಜು ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಡೆನಿಸ್ ಫೆರ್ನಾಂಡಿಸ್ ಅವರು ಅಬ್ಬಕ್ಕನ ಸಾಗರೋತ್ತರ ಸಂಬಂಧ ವಿಷಯದಲ್ಲಿ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಇತಿಹಾಸ ಪ್ರಾಧ್ಯಾಪಕ ಡಾ.ಜಯರಾಮ ಶೆಟ್ಟಿಗಾರ್ ಶಾಸನಗಳಲ್ಲಿ ತುಳುವ ರಾಣಿಯರು ವಿಚಾರವಾಗಿ ವಿಷಯ ಮಂಡಿಸಿದರು.

 ಮಧ್ಯಾಹ್ನ ಬಳಿಕ ಕಾವ್ಯ ಗಾನ ಕುಂಚ ಬಹುಭಾಷಾ ಕವಿಗೋಷ್ಠಿ ಜರುಗಿತು. ಬೆಂಗಳೂರು ದೂರದರ್ಶನ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಆರತಿ ಎಚ್.ಎನ್.ಅಧ್ಯಕ್ಷತೆ ವಹಿಸಿದ್ದರು.


ಪ್ರತಿಯೊಬ್ಬರೂ ತಮ್ಮ ಊರಿನ ಇತಿಹಾಸವನ್ನು ತಿಳಿಯಲು ಪ್ರಯತ್ನ ಮಾಡಬೇಕು. ಶತಮಾನಗಳ ಹಿಂದೆ ಊರು ಹೇಗಿತ್ತು, ಈಗ ಹೇಗಿದೆ ಎಂದು ತಿಳಿದರೆ ನಮ್ಮ ಜ್ಞಾನವೂ ವಿಸ್ತಾರವಾಗುತ್ತದೆ. ಅಬ್ಬಕರನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಇತಿಹಾಸವನ್ನು ತಿಳಿದು, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.
* ಡಾ. ಉದಯ್ ಕುಮಾರ್ ಎಂ.ಎ., ಪ್ರಾಂಶುಪಾಲರು, ವಿವಿ ಕಾಲೇಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News