ಅಬ್ಬಕ್ಕ- ಚೆನ್ನಬೈರಾದೇವಿ ಉತ್ಸವ ಮಾಡಿದರೆ ಉತ್ತಮ: ಡಾ. ಗಣಪಯ್ಯ ಭಟ್

Update: 2020-02-27 11:56 GMT

ಮಂಗಳೂರು, ಫೆ. 27: ಪೋರ್ಚುಗೀಸರ ವಿರುದ್ಧ ಎರಡು ಯುದ್ಧಗಳನ್ನು ಜಯಿಸಿದ್ದ 52 ವರ್ಷಗಳ ಆಳ್ವಿಕೆ ನಡೆಸಿದ್ದ ಚೆನ್ನ ಬೈರಾದೇವಿ ರಾಣಿ ಅಬ್ಬಕ್ಕರ ಸಮಕಾಲೀನರು. ಹಾಗಾಗಿ ಮುಂದೆ ಅಬ್ಬಕ್ಕ- ಚೆನ್ನಬೈರಾದೇವಿ ಹೆಸರಿನಲ್ಲಿ ಉತ್ಸವ ನಡೆದರೆ ಉತ್ತಮ ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಗಣಪಯ್ಯ ಭಟ್ ಅಭಿಪ್ರಾಯಿಸಿದ್ದಾರೆ.

ವೀರರಾಣಿ ಅಬ್ಬಕ್ಕ ಉ್ಸತವ ಪೂರ್ವಭಾವಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ರವೀಂದ್ರ ಕಲಾ ಭವನದಲ್ಲಿ ಗುರುವಾರ ಆಯೋಜಿಸಲಾದ ರಾಣಿ ಅಬ್ಬಕ್ಕ ವಿಚಾರಗೋಷ್ಠಿಯಲ್ಲಿ ‘ಕರಿಮೆಣಸಿನ ರಾಣಿ ಚೆನ್ನ ಬೈರಾದೇವಿ’ ವಿಷಯದಲ್ಲಿ ಅವರು ಮಾತನಾಡಿದರು.

ಸಾಳ್ವೆ ಮನೆತನದ ಈ ಕರಿಮೆಣಸಿನ ರಾಣಿ ಖ್ಯಾತಿಯ ಚೆನ್ನ ಬೈರಾದೇವಿ ಬಗ್ಗೆ ಪ್ರಥಮ ದಾಖಲೆ ಲಭ್ಯವಾಗಿದ್ದು, ಉಪ್ಪುಂದದಲ್ಲಿ. 1554ರಿಂದ 1606ನೆ ಇಸವಿಯವರೆಗೆ ಈಕೆ ಆಳ್ವಿಕೆ ನಡೆಸಿದ್ದು, ಅಬ್ಬಕ್ಕರು ತುಳುನಾಡಿನಲ್ಲಿ ರಾಜ್ಯಭಾರ ಮಾಡುತ್ತಿದ್ದ ಸಂದರ್ಭ ಇವರು ಉತ್ತರ ಕನ್ನಡ ಹಾಗೂ ತುಳುನಾಡಿನ ಉತ್ತರ ಭಾಗದಲ್ಲಿ ರಾಜ್ಯಭಾರ ನಡೆಸಿದ್ದರು. ಪೋರ್ಚುಗೀಸರ ವಿರುದ್ಧ 1569 ಹಾಗೂ 1570ರಲ್ಲಿ ಎರಡು ಯುದ್ಧಗಳನ್ನು ಈಕೆ ಜಯಿಸಿರುವ ದಾಖಲೆಗಳಿವೆ ಎಂದು ಅವರು ಹೇಳಿದರು.

ವಿಶೇಷವೆಂದರೆ ಈಕೆ ಪೋರ್ಚುಗೀಸರ ವಿರುದ್ಧದ ಯುದ್ಧಗಳಲ್ಲಿ ಬಂದೂಕುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಲ್ಲದೆ, ಹೊನ್ನಾವರ ಭಟ್ಕಳದ ಬಂದರಿನಲ್ಲಿ ಪೋರ್ಚುಗೀಸರು ಹಡಗಿನಿಂದ ಇಳಿಯದಂತೆ ತಡೆದಿದ್ದಳು ಎಂಬುದು ಪೋರ್ಚುಗೀಸರ ದಾಖಲೆಯಿಂದಲೇ ಸಾಬೀತಾಗಿದೆ. ಈಕೆ ಸಾಹಸದಿಂದ ಬೆದರಿದ್ದ ಪೋರ್ಚುಗೀಸರು 1591ರಲ್ಲಿ ಪೋರ್ಚುಗೀಸ್ ಭಾಷೆಯಲ್ಲಿಯೇ ಬರೆದ ದಾಖಲೆಯೊಂದರ ಪ್ರಕಾರ, ಆಕೆಯ ಜತೆ ಚಾಣಾಕ್ಷ ಹಾಗೂ ವಿನಯದಿಂದ ಸಂಪರ್ಕವನ್ನು ಇರಿಸಬೇಕೆಂದು ಉಲ್ಲೇಖಿಸಿ ದ್ದರು. ಮೂಡುಬಿದಿರೆ ಜೈನ ಕೇಂದ್ದ ಜತೆ ಉತ್ತಮ ಸಂಬಂಧ ಹೊಂದಿದ್ದ ಈಕೆಯ ಸಹಕಾರದಿಂದಲೇ ಪದುಮಳ ದೇವಿ ಜೈನ ಬಸದಿಯನ್ನು ನಿರ್ಮಿಸಿದ ಬಗ್ಗೆ ಇತಿಹಾಸವಿದೆ. ಜೈನ ಬಸದಿಗಳನ್ನು ನಿರ್ಮಿಸಿದ್ದ ಈಕೆ ಹಿಂದೂ ದೇವಾಲಯಗಳಿಗೆ ಉಂಬಳಿ ನೀಡಿ ಕೋಟೆಗಳನ್ನು ನಿರ್ಮಿಸುವ ಮೂಲಕ ಇತಿಹಾಸದಲ್ಲಿ ಅದ್ಭುತ ಸ್ಥಾನವನ್ನು ಪಡೆದಿದ್ದಾರೆ. 1606ರಲ್ಲಿ ಕೆಳದಿ ಅರಸ ಕೆಳದಿ ವೆಂಕಟಪ್ಪ ನಾಯಕನ ಸೇನೆಯಿಂದ ಈಕೆ ಸೆರೆಹಿಡಿಯಲ್ಪಟ್ಟು ಅವನತಿ ಹೊಂದಿರುವುದು ಇತಿಹಾಸ. ಕೆಳದಿ ಅರಸನ ದಾಳಿಯಿಂದ ರಾಣಿ ಚೆನ್ನ ಬೈರಾದೇವಿ ರಾಜ್ಯಭಾರ ಮಾಡುತ್ತಿದ್ದ ಗೆರಸೊಪ್ಪದ ಬಸದಿ, ಕೋಟೆಗಳನ್ನು ನಾಶ ಮಾಡಲಾಗಿತ್ತು. ಆ ಸಂದರ್ಭ ಪ್ರವಾಸಿಗನಾಗಿ ಬಂದಿದ್ದ ಪೀಟರ್ ಎಂಬಾತ ತನ್ನ ಪ್ರವಾಸಿ ಕಥನದಲ್ಲಿ ಗೆರಸೊಪ್ಪ ಸ್ಮಶಾನ ಮೌನವಾಗಿದ್ದ ಬಗ್ಗೆ ಉಲ್ಲೇಖಿಸಿದ್ದ. ತನ್ನ ಆಡಳಿತ ಅವಧಿಯಲ್ಲಿ ಕರಿಮೆಣಸನ್ನು ಹೊರ ರಾಜ್ಯ ಹಾಗೂ ದೇಶಗಳಿಗೆ ಯಥೇಚ್ಚವಾಗಿ ರಫ್ತು ಮಾಡುತ್ತಿದ್ದರಿಂದ ಈಕೆಗೆ ಕರಿಮೆಣಸಿನ ರಾಣಿ ಎಂದೇ ಕರೆಯಲಾಗುತ್ತಿತ್ತು ಎಂದು ಡಾ. ಗಣಪಯ್ಯ ಭಟ್ ವಿವರ ನೀಡಿದರು.

ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಡೆನಿಸ್ ಫೆರ್ನಾಂಡಿಸ್‌ರವರು ಅಬ್ಬಕ್ಕನ ಸಾಗರೋತ್ತರ ಸಂಬಂಧದ ಬಗ್ಗೆ ವಿಚಾರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News