ಸುರತ್ಕಲ್: ದೆಹಲಿ ಹಿಂಸಾಚಾರ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

Update: 2020-02-27 12:13 GMT

ಮಂಗಳೂರು, ಫೆ.27: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಹಿಂಸಾಕೃತ್ಯ ಹಾಗೂ ಅಮಾಯಕರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಎಸ್‌ಡಿಪಿಐಯಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ರಾಜ್ಯ ಸಮಿತಿಯ ಸದಸ್ಯ ಜಾಫರ್ ಫೈಝಿ, ಅಮಾಯಕರನ್ನು ಗುರಿಯಾಗಿಸಿ ಹಿಂಸಾಕೃತ್ಯ ನಡೆಸುತ್ತಿದೆ. ಮುಸ್ಲಿಮರ ಧಾರ್ಮಿಕ ಕೇಂದ್ರಗಳು ಮತ್ತು ಮುಸ್ಲಿಮರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ಹಿಂಸೆಯನ್ನು ನಡೆಸಲಾಗುತ್ತಿದೆ ಎಂದರು.

ಹಿಂಸಾಚಾರಕ್ಕೆ ಬಿಜೆಪಿಯ ಸಂಸದ ಕಪಿಲ್ ಮಿಶ್ರಾ ನೀಡಿರುವ ಹೇಳಿಕೆ ಹಾಗೂ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಕುಮ್ಮಕ್ಕೇ ಕಾರಣವಾಗಿದೆ. ಅಶಕ್ತ ಮುಸ್ಲಿಮರನ್ನು ತಮಗೆ ಇಚ್ಛೆ ಬಂದ ಹಾಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲ್ಲಲಾಗುತ್ತಿದೆ. ಇದು ಆರೆಸ್ಸೆಸ್‌ನ ವ್ಯವಸ್ಥಿತ ಅಜೆಂಡಾದ ಭಾಗವಾಗಿದೆ. ಹಿಂಸೆಯ ಸಂದರ್ಭ ‘ಜೈ ಶ್ರೀ ರಾಮ್’ ಘೋಷಣೆ ಬಳಸಿ ಶ್ರೀರಾಮನಿಗೂ ಹಿಂದೂ ಧರ್ಮಕ್ಕೂ ಕಳಂಕ ತರಲಾಗುತ್ತಿದೆ. ಅವರು ಇಡೀ ಮಾನವ ಕುಲದ ಶತ್ರುಗಳಾಗಿದ್ದಾರೆ ಎಂದು ಅವರು ಹೇಳಿದರು.

ಸಿಎಎ/ಎನ್‌ಆರ್‌ಸಿ/ಎನ್‌ಪಿಆರ್ ವಿರುದ್ಧ ಪ್ರತಿಭಟಿಸಲು ಸುಪ್ರೀಂಕೋರ್ಟ್ ಹಕ್ಕು ನೀಡಿದೆ. ಪ್ರತಿಭಟನಾಕಾರರನ್ನು ದಮನಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ ಬಿಜೆಪಿ ಸರಕಾರ ಆರೆಸ್ಸೆಸ್ ಹಾಗೂ ಸಂಘ ಪರಿವಾರದ ಮೃಗೀಯ ವರ್ತನೆಯ ಮೂಲಕ ಧಮನಿಸಲು ಹೊರಟಿರುವುದು ಸಲ್ಲದು ಎಂದು ಖಂಡನೆ ವ್ಯಕ್ತಪಡಿಸಿದರು.

ಈ ಸಂದರ್ಭ ಹಿಂಸಾಕೃತ್ಯವನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಎಸ್‌ಡಿಪಿಐ ಜಿಲ್ಲಾ ಸಮಿತಿಯ ಸದಸ್ಯ ನೂರುಲ್ಲಾ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News