ಸೂರಲ್ಪಾಡಿ: ಖೋಟಾನೋಟು ನೀಡಿ ವ್ಯವಹಾರ; ಇಬ್ಬರು ಆರೋಪಿಗಳು ಸೆರೆ

Update: 2020-02-27 15:32 GMT

ಮಂಗಳೂರು, ಫೆ.27: ಖೋಟಾ ನೋಟು ನೀಡಿ ವ್ಯವಹಾರ ನಡೆಸಲು ಮುಂದಾದ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ತಾಲೂಕಿನ ಕೊಡ್ಮಣ್‌ನ ಕಾಂಜಿಲ ಕೋಡಿ ಮನೆಯ ಧೀರೇಂದ್ರ (45), ಅಡ್ಯಾರ್ ವಲಬೈಲ್‌ನ ಸುಧೀರ್ ಪೂಜಾರಿ (44) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ನೀರುಮಾರ್ಗದ ಕೆಲರಾಯ್ ಎಂಬಲ್ಲಿಂದ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಲರ್ ಪ್ರಿಂಟರ್ ಮತ್ತು ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಡಗ ಉಳಿಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿನ ಗೂಡಂಗಡಿ ವ್ಯಾಪಾರಿ ಅಬ್ದುಲ್ ಸಲಾಂ ಎಂಬವರ ಬಳಿ ಫೆ.23ರಂದು ರಾತ್ರಿ 8:30ಕ್ಕೆ ಕೆಎ 20 ಯು 4985ನೇ ಸಂಖ್ಯೆಯ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬಾತ 20 ರೂ. ಬೆಲೆಯ ಜಿಲೆಟ್ ಬ್ಲೇಡ್ ಪಡೆದು 200 ರೂ. ಮುಖಬೆಲೆಯ ನೋಟು ಕೊಟ್ಟಿದ್ದ. ಗೂಡಂಗಡಿ ವ್ಯಾಪಾರಿ ಅಬ್ದುಲ್ ಸಲಾಂ 180 ರೂ. ಮರಳಿಸಿದ್ದರು. ಈ ಮಧ್ಯೆ ಈ ಇಬ್ಬರು ಅಪರಿಚಿತರು ಗೂಡಂಗಡಿಯ ಬಳಿಯ ಮುಹಮ್ಮದ್ ಆರೀಫ್‌ರವರ ಅಂಗಡಿಗೆ ತೆರಳಿ ಸಾಸಿವೆ ಖರೀದಿಸಿ ಅವರಿಗೆ ಕೂಡಾ 200 ರೂ. ಮುಖಬೆಲೆಯ ನೋಟು ನೀಡಿದ್ದರು. ಈ ವೇಳೆ ಅಬ್ದುಲ್ ಸಲಾಂ ಅವರು ಆರೀಫ್ ಬಳಿ ನೋಟಿನ ಬಗ್ಗೆ ಸಂಶಯ ವ್ಯಕ್ತಪಡಿಸಿದರು, ಅಷ್ಟರಲ್ಲಿ ಅಪರಿಚಿತರು ಆರೀಫ್‌ರ ಕೈಯಲ್ಲಿದ್ದ ನೋಟನ್ನು ಎಳೆದುಕೊಂಡು ಅಬ್ದುಲ್ ಸಲಾಂರನ್ನು ದೂಡಿ ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಅಬ್ದುಲ್ ಸಲಾಂ ಬಜ್ಪೆ ಠಾಣೆಗೆ ದೂರು ನೀಡಿದ್ದರು.

ಕಾರ್ಯಾಚರಣೆಯಲ್ಲಿ ಎಸಿಪಿ ಬೆಳಿಯಪ್ಪ, ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ್, ಉಪ ನಿರೀಕ್ಷಕರಾದ ಸತೀಶ್ ಎಂ.ಪಿ., ಕಮಲಾ, ಎಸ್ಸೈಗಳಾದ ಜರ್ನಾದನ ಗೌಡ, ರಾಮಪೂಜಾರಿ, ರಾಮಚಂದ್ರ, ಪುರುಷೋತ್ತಮ್, ಸುಧೀರ್ ಶೆಟ್ಟಿ, ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News