ಮಣಿಪಾಲ: ವಿಜ್ಞಾನ ಪ್ರಯೋಗಗಳ ಮಾದರಿ ಪ್ರದರ್ಶನ; ರಾ.ವಿಜ್ಞಾನ ದಿನಾಚರಣೆ

Update: 2020-02-27 15:34 GMT

ಮಣಿಪಾಲ, ಫೆ.27: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಮಣಿಪಾಲ ಮಾಹೆಯ ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನಲ್ಲಿ ವಿಜ್ಞಾನದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ಮಾದರಿಗಳು, ಪ್ರಯೋಗಗಳ ವಿಜ್ಞಾನ ವಸ್ತು ಪ್ರದರ್ಶನ ಗುರುವಾರ ಸಂಸ್ಥೆಯಲ್ಲಿ ಪ್ರದರ್ಶನಗೊಂಡಿತು.

ವಿಜ್ಞಾನ ವಸ್ತು ಪ್ರದರ್ಶನವನ್ನು ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಸಂಜೆ ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ಪ್ರಮುಖ ಶಾಲೆಗಳ ಪ್ರತಿಭಾನ್ವಿತ 9ನೇ ತರಗತಿಯ ವಿದ್ಯಾರ್ಥಿಗಳು ತಯಾರಿಸಿದ 50ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.

ಪ್ರದರ್ಶನದಲ್ಲಿ ಸಜೀವ ಪ್ರಾಣಿಗಳು, ಜೀವಕೋಶ, ಬ್ಯಾಕ್ಟೀರಿಯಾ, ಜೀವಿಗಳು, ಅಂಗಗಳು, ಬೆಳಕು ಮತ್ತು ಲೇಸರ್ ಕಿರಣ, ಡಿಎನ್‌ಎಗಳ ಮಾದರಿಗಳು, ಕೊರೊನಾ ವೈರಸ್, ಸುಸ್ಥಿರ ಕೃಷಿಯ ಮಾದರಿ, ಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರಗಳ ವಿವಿಧ ಪ್ರಯೋಗಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಜಿಲ್ಲೆಯ ಪ್ರಮುಖ ಶಾಲೆಗಳ ವಿಜ್ಞಾನದಲ್ಲಿ ಆಸಕ್ತಿ ಇರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ದು ಅವರಿಗೆ ಕಳೆದೊಂದು ವಾರದಿಂದ ಮಣಿಪಾಲ ಲೈಫ್ ಸಾಯನ್ಸ್‌ನಲ್ಲಿ ತರಬೇತಿಯನ್ನು ನೀಡಲಾಗಿತ್ತು. ಈ ವಿದ್ಯಾರ್ಥಿಗಳು ಪ್ರದರ್ಶನಗೊಂಡ ವಿಜ್ಞಾನದ ಮಾದರಿಗಳನ್ನು ತಯಾರಿಸಿದ್ದರು.

ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದ ಡಾ.ವಿನೋದ್ ಭಟ್ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಿದರು. ಈ ಪ್ರದರ್ಶನ ಶುಕ್ರವಾರ ಅಪರಾಹ್ನದವರೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಹೆತ್ತವರ ವೀಕ್ಷಣೆಗೆ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ನಿರ್ದೇಶಕ ಡಾ.ಕೆ.ಸತ್ಯಮೂರ್ತಿ ಉಪಸ್ಥಿತರಿದ್ದರು.

ಮಾಹೆಯ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಾಳೆ ಅಪರಾಹ್ನ 3 ಗಂಟೆಗೆ ಮಣಿಪಾಲದ ವ್ಯಾಲಿವ್ಯೆ ಹೊಟೇಲಿನ ಚೈತ್ಯ ಹಾಲ್‌ನಲ್ಲಿ ನಡೆಯಲಿದೆ. ನಾಡಿನ ಖ್ಯಾತ ವಿಜ್ಞಾನಿ ಡಾ.ವೈ.ಎಸ್.ರಾಜನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿ ದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News