‘ಹೊಸ ಬೆಳಕು’ ಅನಾಥಾಶ್ರಮದ ಮೂರರ ಸಂಭ್ರಮ

Update: 2020-02-27 15:38 GMT

ಉಡುಪಿ, ಫೆ.27: ಮಣಿಪಾಲ ಸರಳೆಬೆಟ್ಟಿನ ಹೊಸಬೆಳಕು ಸೇವಾ ಟ್ರಸ್ಟ್ ಮೂಲಕ ಸಮಾಜದ ಅನಾಥರು, ಧಿಕ್ಕಿಲ್ಲದ ನಿರ್ಗತಿಕರಿಗೆ ಆಶ್ರಯ ನೀಡುತಿರುವ ಹೊಸಬೆಳಕು ಅನಾಥಾಶ್ರಮ ಇದೀಗ ಮೂರನೇ ವರ್ಷದ ಸಂಭ್ರಮದಲ್ಲಿದ್ದು, ಇದರ ಸೇವಾ ವ್ಯಾಪ್ತಿಯನ್ನು ವಿಸ್ತರಿಸಲು ಮಾ.1ರಂದು ಸಂಜೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ವಿನಯ ಚಂದ್ರ ಸಾಸ್ತಾನ ಹಾಗೂ ತನುಲಾ ತರುಣ್ ತಿಳಿಸಿದ್ದಾರೆ.

ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇವಲ ಅನಾಥರನ್ನು ಮಾತ್ರ ಈ ಸಂಸ್ಥೆಯಲ್ಲಿ ಸೇರ್ಪಡೆಗೊಳಿಸಿ ಅವರ ಆರೈಕೆ ಮಾಡಲಾಗುತ್ತಿದೆ. ಈಗ ಆಶ್ರಮದಲ್ಲಿ 7 ಮಂದಿ ವೃದ್ಧರು, ನಾಲ್ವರು ಮಹಿಳೆಯರು ಹಾಗೂ ಓರ್ವ ವಿಶೇಷ ಮಗು ಸೇರಿ ಒಟ್ಟು 15 ಮಂದಿ ಆಶ್ರಯ ಪಡೆದಿದ್ದಾರೆ.

ಇವರಿಗೆ ಊಟೋಪಚಾರ, ಬಟ್ಟೆಬರೆ, ವೈದ್ಯಕೀಯ ಸೇವೆ ನೀಡಲು ಸಾಕಷ್ಟು ಮೊತ್ತದ ಅಗತ್ಯವಿದ್ದು, ಈಗ ಟ್ರಸ್ಟಿಗಳ ಕೈಯಿಂದ ಇಲ್ಲವೇ ದಾನಿಗಳು ನೀಡಿದ ಮೊತ್ತದಿಂದ ಇವುಗಳನ್ನು ನಿಭಾಯಿಸಲಾಗುತ್ತಿದೆ. ಮಣಿಪಾಲದ ಸರಳೆಬೆಟ್ಟಿನಲ್ಲಿರುವ ಸಹೃದಯಿ ಯೊಬ್ಬರು ಬಿಟ್ಟುಕೊಟ್ಟ ಮನೆಯಲ್ಲಿ ಈಗ ಆಶ್ರಮ ನಡೆಯುತ್ತಿದೆ. ಮುಂದೆ ಇದನ್ನು ವಿಸ್ತರಿಸಲು, ಒಂದು ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿ 50-60 ಮಂದಿ ನಿರ್ಗತಿಕರಿಗೆ ಆಶ್ರಯ ನೀಡಲು ಉದ್ದೇಶಿಸಲಾಗಿದೆ ಎಂದು ವಿನಯಚಂದ್ರ ನುಡಿದರು.

ಇದಕ್ಕಾಗಿ ಹಣ ಸಂಗ್ರಹಿಸಲು ಮಾ.1ರಂದು ಬೆಳಕು ಮೂರರ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 7ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದರೊಂದಿಗೆ ಆಕಾಶವಾಣಿ ಕಲಾವಿದರಿಂದ ಸುಗಮ ಸಂಗೀತ ಕಾರ್ಯ ಕ್ರಮ, ಕಲಾನಿಧಿ ಸಾಂಸ್ಕೃತಿಕ ಕಲಾ ಪ್ರಕಾರಗಳ ಸಂಸ್ಥೆಯಿಂದ ಸುಗಮ ಸಂಗೀತ, ಕಲರ್‌ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಸ್ಟೈಲ್ ಡ್ಯಾನ್ಸ್ ಸಾಸ್ತಾನ ತಂಡದಿಂದ ವಿಶೇಷ ನೃತ್ಯ ಹಾಗೂ ಹಳ್ಳಾಡಿಯ ಕಲಾಚಿಗುರು ಕಲಾತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ತಮ್ಮ ಈ ಕಾರ್ಯಕ್ರಮದಲ್ಲಿ ಸಹೃದಯಿ ದಾನಿಗಳು ಕೈಜೋಡಿಸುವಂತೆ ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News