ಅಂಧತ್ವದ ನಡುವೆಯೂ ರ‍್ಯಾಂಕ್ ಮೂಲಕ ಶೈಕ್ಷಣಿಕ ಸಾಧನೆಗೈದ ನಿತ್ಯಾನಂದ

Update: 2020-02-27 15:54 GMT

ಕೊಣಾಜೆ: ಒಂದೆಡೆ ಆರ್ಥಿಕವಾದ ಬಡತನ, ಮತ್ತೊಂದೆಡೆ ಬಾಲ್ಯದಿಂದಲೇ ಕಾಡುತ್ತಿರುವ ಅಂಧತ್ವ. ಇವುಗಳೆಲ್ಲವನ್ನು‌ ಸವಾಲಾಗಿ ಸ್ವೀಕರಿಸಿ ಬಿಎಸ್ ಡಬ್ಲ್ಯುವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಮಂಗಳೂರು ವಿವಿಯಲ್ಲಿ ಪ್ರಥಮ ರ‍್ಯಾಂಕ್ ನೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡರು.

ಒಂದನೆಯಿಂದ ನಾಲ್ಕನೆಯ ತರಗತಿಯವರೆಗೆ ಮಂಗಳೂರಿನಲ್ಲಿ ಶಿಕ್ಷಣ ಪಡೆದ ನಿತ್ಯಾನಂದ ಅವರು ಬಳಿಕ ಐದನೇ ತರಗತಿಯನ್ನು ಶಿವಮೊಗ್ಗದಲ್ಲಿ, ಆರನೇ ತರಗತಿಯನ್ನು ಬೆಂಗಳೂರಿನಲ್ಲಿ ಪೂರೈಸಿದರು. ಏಳರಿಂದ ಪಿಯುಸಿಯವರೆಗೆ ಮಂಗಳೂರಿನಲ್ಲಿ ಹಾಗೂ ಬಿಎಸ್ ಡಬ್ಲ್ಯು ಪದವಿಯನ್ನು ಆಳ್ವಾಸ್ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನಿತ್ಯಾನಂದರಿಗೆ ತಾಯಿಯೇ ಆಧಾರಸ್ಥಂಭವಾಗಿದ್ದರು. ಅಂಗನನಾಡಿ‌ಯಲ್ಲಿ ಕೆಲಸಕ್ಕಿರುವ ಇವರ ತಾಯಿ ನಿತ್ಯಾನಂದರ ಶೈಕ್ಷಣಿಕ ಕನಸಿಗೆ ಬೆನ್ನೆಲುಬಾಗಿ‌ ನಿಂತು ಪ್ರೋತ್ಸಾಹ‌ ನೀಡಿದ್ದಾರೆ.

ಮೋಹನ್ ಆಳ್ವರ ಸಹಕಾರದಲ್ಲಿ ಉಚಿತ‌ ಶಿಕ್ಷಣದೊಂದಿಗೆ ಉಚಿತವಾಗಿ ಹಾಸ್ಟೇಲ್ ಕೂಡಾ ಲಭಿಸಿತ್ತು. ಅಲ್ಲದೆ‌ ಎಲ್ಲ ಶಿಕ್ಷಕರು, ಪೋಷಕರು, ಗೆಳೆಯರ ಸಹಕಾರದಿಂದ ಇಂದು ಶೈಕ್ಷಣಿಕವಾಗಿ ಸಾಧನೆಗೈಯಲು ಸಾಧ್ಯವಾಗಿದೆ ಎನ್ನುತ್ತಾರೆ ನಿತ್ಯಾನಂದ.

ಸ್ಕ್ರೀನ್ ರೀಡಿಂಗ್ ಸಾಪ್ಟ್ ವೇರ್ ಮೂಲಕ ಅಧ್ಯಯನ

ಪದವಿಯಲ್ಲಿ ನನ್ನ ಅಧ್ಯಯನಕ್ಕೆ ಎಲ್ಲಾ ಶಿಕ್ಷಕರು‌ ಸಹಕರಿಸಿದ್ದಾರೆ. ಜೊತೆಗೆ ಲ್ಯಾಪ್ ಟಾಪ್ ಹಾಗೂ ಮೊಬೈಲ್ ನಲ್ಲಿ‌ ಸ್ಕ್ರೀನ್ ರೀಡಿಂಗ್ ಸಾಪ್ಟ್ ವೇರ್ ಅಳವಡಿಸಿ ಅದರ ಮೂಲಕ ಅಧ್ಯಯನ ಮಾಡಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಜೊತೆಗೆ‌ ಇನ್ನಿಬ್ಬರು ಅಂಧ ವಿದ್ಯಾರ್ಥಿಗಳಾದ ಗುರುರಾಜ್ ಮತ್ತು ಪ್ರದೀಪ್ ಇದ್ದು‌ ಕ್ರಮವಾಗಿ ಅವರಿಗೆ ಕೂಡಾ ದ್ವಿತೀಯ, ತೃತೀಯ ‌ರ‍್ಯಾಂಕ್ ಬಂದಿರುವುದು ಸಂತಸ ತಂದಿದೆ ಎಂದರು.

ಈಗ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದು, ಯಾವುದಾದರೂ ಸರ್ಕಾರಿ‌ ಉದ್ಯೋಗ ಅಥವಾ ಕಂಪೆನಿಯಲ್ಲಿ ಉದ್ಯೋಗ ದೊರೆತರೆ ತಾಯಿಯೊಂದಿಗೆ ನೆಮ್ಮದಿಯ‌ ಬದುಕನ್ನು ಕಳೆಯಬೇಕೆಂಬ ಆಸೆಯಿದೆ ಎಂದು ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News