ಪುತ್ತೂರಿನಲ್ಲಿ ಗುರುವಾರ 10ಮಿ.ಮೀ ಮಳೆ

Update: 2020-02-27 16:16 GMT

ಪುತ್ತೂರು: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪುತ್ತೂರು ನಗರದಲ್ಲಿ ಫೆಬ್ರವರಿ ತಿಂಗಳಲ್ಲಿ ಮಳೆ ಸುರಿದ ದಾಖಲೆಯಿಲ್ಲ. ಆದರೆ ಗುರುವಾರ ಬೆಳಗ್ಗೆ 2 ತಾಸು ಕಾಲ ಪುತ್ತೂರಿನಲ್ಲಿ ಸಾಧಾರಣ ಮಳೆ ಸುರಿದಿದೆ. ಬೆಳಗ್ಗೆ 5ರಿಂದ 7 ಗಂಟೆಯ ಅವಧಿಯಲ್ಲಿ ಪುತ್ತೂರಿನಲ್ಲಿ 10 ಮಿ.ಮೀ. ಮಳೆ ದಾಖಲಾಗಿದೆ.

ಕಳೆದ ವರ್ಷ ಪುತ್ತೂರಿನಲ್ಲಿ ಎಪ್ರಿಲ್ 3ರಂದು ಪ್ರಥಮ ಮಳೆ ಸುರಿದಿತ್ತು. ಎ.3ರಂದು ಸುರಿದ ಮಳೆಯ ಪ್ರಮಾಣ 18 ಮಿ.ಮೀ. ಬುಧವಾರ ಪುತ್ತೂರು ನಗರದಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದರ ಪರಿಣಾಮವಾಗಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಕಳೆದ ವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿರಲಿಲ್ಲ. ಎಪ್ರಿಲ್ 3ರಂದು 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಪುತ್ತೂರು ನಗರ ಸೇರಿದಂತೆ ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, ಕೋಡಿಂಬಾಡಿ, ಬಡಗನ್ನೂರು, ಈಶ್ವರಮಂಗಲ, ಪಾಣಾಜೆ, ಕುಂಬ್ರ, ತಿಂಗಳಾಡಿ, ನರಿಮೊಗರು, ಬೆಟ್ಟಂಪಾಡಿ ಪರಿಸರದಲ್ಲಿ ಗುರುವಾರ ಬೆಳಗ್ಗೆ ಮಳೆಯಾಗಿದೆ. ಅನಿರೀಕ್ಷಿತವಾಗಿ ಸುರಿದ ಮಳೆಯ ಪರಿಣಾಮ ಕೃಷಿಕರ ಮನೆಯಂಗಳದಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆ, ಕೊಬ್ಬರಿ ಮಳೆ ನೀರಿಗೆ ಒದ್ದೆಯಾಗಿ ನಷ್ಟ ಸಂಭವಿಸಿದೆ. ಒಣಗಲು ಹಾಕಲಾಗಿದ್ದ ಕೃಷಿ ಉತ್ಪನ್ನಗಳನ್ನು ರಾತ್ರಿ ತೆಗೆಯದ ಕಾರಣ ಅನಿರೀಕ್ಷಿತವಾಗಿ ಸುರಿದ ಮಳೆಗೆ ಒದ್ದೆಯಾಗುವಂತಾಯಿತು.

ಕಳೆದ ಮೂರು ದಿನಗಳಿಂದ ತಾಪಮಾನದಲ್ಲಿ ಗರಿಷ್ಟ ಏರಿಕೆಯಾಗಿದ್ದು, ಸೆಖೆಯಿಂದ ಜನತೆ ಪರದಾಡುವಂತಾಗಿತ್ತು. ಬುಧವಾರ ರಾತ್ರಿಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಗುರುವಾರ 3.30 ಗಂಟೆ ಹೊತ್ತಿಗೆ ಮಂಜಿನ ಹನಿಗಳಂತೆ ಮಳೆ ಬೀಳಲಾರಂಭಿಸಿತು. 5.30 ಗಂಟೆಗೆ ರಭಸವಾಗಿ ಮಳೆ ಸುರಿಯಿತು.

ಗುರುವಾರ ಬೆಳಗ್ಗೆ ಮಳೆ ಸುರಿದ ಬಳಿಕ ನಗರದಲ್ಲಿ ಪೂರ್ವಾಹ್ನ 11 ಗಂಟೆಯ ವರೆಗೆ ಮೋಡ ಕವಿದ ವಾತಾವರಣವಿತ್ತು. ಬಳಿಕ ಬಿಸಿಲಿನ ವಾತಾವರಣ ಉಂಟಾದರೂ ವಿಪರೀತ ಸೆಖೆಯ ಅನುಭವ ಉಂಟಾಗುತ್ತಿತ್ತು. ಮಳೆಯ ಕಾರಣದಿಂದಾಗಿ ನೀರು ಇಂಗಿ ಭೂಮಿಯಿಂದ ಧಗೆ ಹೊರ ಬಂದ ಕಾರಣ ಈ ರೀತಿ ಉಂಟಾಗಿದೆ ಎನ್ನಲಾಗುತ್ತಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News