ದಿಲ್ಲಿ ಹಿಂಸಾಚಾರ: ಹೊತ್ತಿ ಉರಿಯುತ್ತಿದ್ದ ನೆರೆಮನೆಯಿಂದ ಪ್ರಾಣ ಒತ್ತೆ ಇಟ್ಟು 6 ಜನರನ್ನು ರಕ್ಷಿಸಿದ ಪ್ರೇಮಕಾಂತ್

Update: 2020-02-27 16:28 GMT

ಹೊಸದಿಲ್ಲಿ: ಹಿಂಸಾಚಾರದಿಂದ ನಲುಗಿರುವ ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತೆ ಶಾಂತಸ್ಥಿತಿಗೆ ಮರಳುತ್ತಿದೆ. ರವಿವಾರದಿಂದ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸೌಹಾರ್ದದಿಂದಿದ್ದ ರಾಜಧಾನಿ ಇದ್ದಕ್ಕಿದ್ದಂತೆ ಕೋಮು ಹಿಂಸಾಚಾರವನ್ನು ಎದುರಿಸಿದ್ದು, ನೂರಾರು ಮನೆಗಳು, ವಾಹನಗಳು, ಮಸೀದಿ, ದರ್ಗಾಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಎಲ್ಲಾ ಕೋಮು ಹಿಂಸೆಯ ಘಟನೆಗಳ ನಡುವೆ ದಿಲ್ಲಿಯು ಹಲವು ಸೌಹಾರ್ದದ ಸನ್ನಿವೇಶಗಳಿಗೂ ಸಾಕ್ಷಿಯಾಗಿದೆ.

ಹಿಂಸಾಚಾರಕ್ಕೆ ಬೆದರಿ ಮನೆಗಳಿಂದ ಪರಾರಿಯಾದ ಮುಸ್ಲಿಮರಿಗಾಗಿ ಗುರುದ್ವಾರವೊಂದು ಬಾಗಿಲು ತೆರೆದಿದ್ದರೆ, ಸುಮಾರು 40 ಮುಸ್ಲಿಂ ಕುಟುಂಬಗಳಿಗೆ ಹಿಂದೂಗಳು ಆಶ್ರಯ ಒದಗಿಸಿದ್ದಾರೆ. ಈ ನಡುವೆ ತನ್ನ ಪಕ್ಕದ ಮನೆಯ ಮುಸ್ಲಿಂ ಗೆಳೆಯನ ಕುಟುಂಬವೊಂದನ್ನು ರಕ್ಷಿಸಿದ ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಶಿವ ವಿಹಾರ್ ಗೆ ನುಗ್ಗಿದ್ದ ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡವು ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ನಡೆಸಿತ್ತು ಮತ್ತು ಬೆಂಕಿ ಹಚ್ಚಿತ್ತು. ತನ್ನ ಪಕ್ಕದ ಮನೆಯ, ಗೆಳೆಯನ ಮನೆಯ ಮೇಲೂ ದಾಳಿ ನಡೆದಿದ್ದನ್ನು ಪ್ರೇಮಕಾಂತ್ ಬಾಘೇಲ್ ಎಂಬ ಯುವಕ ನೋಡಿದ್ದ. ಕೂಡಲೇ ಅವರು ಧಾವಿಸಿ ಬಂದು ಗೆಳೆಯನ ಮನೆಯೊಳಗೆ ನುಗ್ಗಿದ್ದರು. ನಂತರ ತನ್ನ ಪ್ರಾಣ ಒತ್ತೆ ಇಟ್ಟು ಮನೆಯಲ್ಲಿದ್ದ 6 ಜನರನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದರು. ಮನೆಯೊಳಗೆ ಸಿಲುಕಿದ್ದ ಗೆಳೆಯನ ವೃದ್ಧ ತಾಯಿಯನ್ನು ರಕ್ಷಿಸುವಾಗ ಬಾಘೇಲ್ ಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಬಾಘೇಲ್ ರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಪಕ್ಕದ ಮನೆಯವರು ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ ಸ್ಥಳಕ್ಕೆ ತಲುಪಲು ಆ್ಯಂಬುಲೆನ್ಸ್ ಗೆ ಸಾಧ್ಯವಾಗಲಿಲ್ಲ. ಸುಮಾರು 70 ಶೇ.ದಷ್ಟು ಸುಟ್ಟ ಗಾಯಗಳೊಂದಿಗೆ ಬಾಘೇಲ್ ರಾತ್ರಿಯಿಡೀ ಮನೆಯಲ್ಲೇ ಇರಬೇಕಾಯಿತು. ಬೆಳಗ್ಗೆ ಅವರನ್ನು ಹೇಗೋ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇದೀಗ ಬಾಘೇಲ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ತನ್ನ ಗೆಳೆಯನ ತಾಯಿಯ ಪ್ರಾಣ ಉಳಿಸಲು ಸಾಧ್ಯವಾದದ್ದಕ್ಕೆ ಸಂತೋಷಪಡುತ್ತೇನೆ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News