‘ನಾನು ಸಂಸದ ಎಂದರೂ’…: ದಿಲ್ಲಿ ಪೊಲೀಸರ ವರ್ತನೆ ಬಗ್ಗೆ ಎನ್ ಡಿಎ ಮಿತ್ರಪಕ್ಷದ ಸಂಸದನಿಂದ ಅಮಿತ್ ಶಾಗೆ ಪತ್ರ

Update: 2020-02-27 16:54 GMT

ಹೊಸದಿಲ್ಲಿ, ಫೆ.27: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಸಂದರ್ಭ ದಿಲ್ಲಿ ಪೊಲೀಸರ ಅಸಡ್ಡೆಯ ವರ್ತನೆ ಮತ್ತು ನಿಷ್ಕ್ರಿಯತೆಯನ್ನು ಖಂಡಿಸಿ ಶಿರೋಮಣಿ ಅಕಾಲಿದಳದ ಸಂಸದ ನರೇಶ್ ಗುಜ್ರಾಲ್ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಅಕಾಲಿದಳವು ಎನ್‌ಡಿಯ ಮೈತ್ರಿಕೂಟದ ಸಹಪಕ್ಷವಾಗಿದೆ. ಈಶಾನ್ಯ ದಿಲ್ಲಿಯ ಮೌಜ್‌ಪುರ ಪ್ರದೇಶದಲ್ಲಿನ ಮನೆಯೊಂದರಲ್ಲಿ ಬುಧವಾರ ರಾತ್ರಿ 16 ಮುಸ್ಲಿಮರು ಆಶ್ರಯ ಪಡೆದಿದ್ದರು. ಆಗ ಮನೆಯನ್ನು ಸುತ್ತುವರಿದ ಕಿಡಿಗೇಡಿಗಳ ಗುಂಪು ಬಾಗಿಲು ಮುರಿದು ಒಳನುಗ್ಗುವ ಪ್ರಯತ್ನ ನಡೆಸಿತ್ತು. ಈ ಬಗ್ಗೆ ಮಾಹಿತಿ ದೊರಕಿದ ತಕ್ಷಣ ದಿಲ್ಲಿ ಪೊಲೀಸರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದೆ. ತಾನೊಬ್ಬ ಸಂಸದ ಎಂದು ಹೇಳಿದರೂ ಅವರು ಅಸಡ್ಡೆಯಿಂದ ವರ್ತಿಸಿದರು ಎಂದು ಗುಜ್ರಾಲ್ ದೂರಿದ್ದಾರೆ.

ಮೊದಲು ಕರೆ ಸ್ವೀಕರಿಸಲು ಒಪ್ಪದ ಆಪರೇಟರ್, ತಾನು ಸಂಸದ ಎಂದು ಹೇಳಿದ ಬಳಿಕ ವಿಳಂಬವಾಗಿ ತನ್ನ ದೂರನ್ನು ದಾಖಲಿಸಿದ್ದು ದೂರಿನ ರೆಫರೆನ್ಸ್ ಸಂಖ್ಯೆಯನ್ನು ತಿಳಿಸಿದ್ದಾನೆ. ಆದರೆ, ದೂರಿನ ಬಗ್ಗೆ ಗಮನ ಹರಿಸಲೇ ಇಲ್ಲ. ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಮುಸ್ಲಿಮರ ನೆರವಿಗೆ ನೆರೆಹೊರೆಯ ಕೆಲವು ಹಿಂದೂಗಳು ಧಾವಿಸಿ ಅಲ್ಲಿಂದ ಹೊರಬರಲು ನೆರವಾಗಿದ್ದಾರೆ. ಓರ್ವ ಸಂಸದ ನೀಡಿದ ದೂರಿನ ಬಗ್ಗೆಯೇ ಈ ರೀತಿ ನಿರ್ಲಕ್ಷ ತೋರಿದ್ದಾರೆಂದರೆ ಜನಸಾಮಾನ್ಯರ ಪಾಡೇನು ಎಂದು ಗುಜ್ರಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜ್ರಾಲ್ ಈ ಹಿಂದೆಯೂ ಕೇಂದ್ರ ಸರಕಾರದ ಕೆಲವು ನಿರ್ಧಾರಗಳ ಬಗ್ಗೆ ಅಸಮ್ಮತಿ ಸೂಚಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಟಿವಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಪೌರತ್ವ ಕಾಯ್ದೆಯಲ್ಲಿ ಮುಸ್ಲಿಮ್ ಸಮುದಾಯವನ್ನೂ ಸೇರಿಸಬೇಕು ಎಂದು ಹೇಳಿಕೆ ನೀಡಿ ಎನ್‌ಡಿಎ ಮೈತ್ರಿಕೂಟಕ್ಕೆ ಮುಜುಗುರ ಉಂಟುಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News