ಬ್ರಹ್ಮಾವರ: ಫೆ.29ರಂದು ‘ವಾಯ್ಸ್ ಆಫ್ ಕರಾವಳಿ’ ಫೈನಲ್

Update: 2020-02-27 16:55 GMT

ಬ್ರಹ್ಮಾವರ, ಫೆ.27:ರೋಟರಿ ಬ್ರಹ್ಮಾವರ ಆಶ್ರಯದಲ್ಲಿ ರಾಜ್ಯಮಟ್ಟದ ವಾಯ್ಸ್ ಆಫ್ ಕರಾವಳಿ ಸ್ಪರ್ಧೆಯ ಫೈನಲ್ ಫೆ.29ರ ಶನಿವಾರ ಸಂಜೆ 6:30ಕ್ಕೆ ಬ್ರಹ್ಮಾವರದ ನಿರ್ಮಲ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ರೋಟರಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಖ್ಯಾತ ಮನೋರೋಗ ತಜ್ಞ, ಸಾಮಾಜಿಕ ಚಿಂತಕ ಡಾ. ಪಿ.ವಿ. ಭಂಡಾರಿ ಇವರಿಗೆ ಪ್ರದಾನ ಮಾಡಲಾಗುವುದು ರೋಟರಿ ಅಧ್ಯಕ್ಷ ಎಸ್.ಕೆ.ಪ್ರಾಣೇಶ್ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3182 ಇದರ ಮುಂದಿನ ಸಾಲಿನ ಗವರ್ನರ್ ರಾಜರಾಮ್ ಭಟ್ ಹಾಗೂ ವಲಯ 3ರ ಅಸಿಸ್ಟೆಂಟ್ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ ಆಗಮಿಸಲಿದ್ದಾರೆ.

ಈಗಾಗಲೇ ನಡೆದ ವಾಯ್ಸ್ ಆಫ್ ಕರಾವಳಿಯ ಪ್ರಥಮ ಸುತ್ತಿನ ಸ್ಪರ್ಧೆಗೆ ರಾಜ್ಯಾದ್ಯಂತದಿಂದ ನೂರಾರು ಸ್ಫರ್ಧಿಗಳು ಭಾಗವಹಿಸಿದ್ದು, ಇವರಲ್ಲಿ 33 ಸ್ಫರ್ಧಿಗಳನ್ನು ಸೆಮಿಫೈನಲ್ ಹಂತಕ್ಕೆ ಆಯ್ಕೆ ಮಾಡಿ, ಮುಂದೆ ಇವರಲ್ಲಿ 12 ಮಂದಿ ಹಾಡುಗಾರರನ್ನು ಫೈನಲ್‌ಗೆ ಆಯ್ಕೆ ಮಾಡಲಾಗಿತ್ತು.

ಸ್ಪರ್ಧೆಯ ಫೈನಲ್‌ಗೆ ಆಯ್ಕೆಯಾದವರಲ್ಲಿ ಚಿನ್ಮಯಿ ವಿ ಭಟ್ ಮಂಗಳೂರು, ವಿ.ಪಿ. ಶ್ರೀಹರಿಹೊಳ್ಳ, ಮಧುಶ್ರೀ ಕಿದಿಯೂರು, ಭರತ್ ತೀರ್ಥಹಳ್ಳಿ, ದೀಕ್ಷಾ ಬಸ್ರೂರು, ಸಂದೇಶ ಆಚಾರ್ಯ ಉಪ್ಪೂರು, ಲಿಷಾ ಕೊಕ್ಕರ್ಣೆ, ಸಮರ್ಥ ಚಥುರ್ವೇದಿ ಶಿವಮೊಗ್ಗ, ವಿಜಯಶ್ರೀ ಭಟ್ ಅಳಿಕೆ ಬಂಟ್ವಾಳ, ಅನ್ವಿತ ಜೆ ಮೂರ್ತಿ ಉಡುಪಿ, ನಿಶಾ ಎನ್ ಕಂಜಗೋಡು ತ್ರಾಸಿ ಹಾಗೂ ಗ್ರೀಷ್ಮಾ ಕಟೀಲ್ ಸೇರಿದ್ದಾರೆ.

ವಿಜೇತರಿಗೆ ವಾಯ್ಸ್ ಆಫ್ ಕರಾವಳಿ ಪ್ರಶಸ್ತಿಯೊಂದಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ಅಲ್ಲದೇ ಫೈನಲ್‌ನ ಎಲ್ಲಾ ಸ್ಫರ್ಧಿಗಳಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಅಲ್ಲದೆ, ಸೆಮಿಫೈನಲ್ ಹಂತದ 33 ಹಾಡುಗಾರರ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು. ಇವರಲ್ಲಿ ಅತಿ ಹೆಚ್ಚು ಮಂದಿ ಲೈಕ್ಸ್ ಪಡೆದ ಹಾಡುಗಾರರಿಗೆ ಸ್ಟಾರ್ ಸಿಂಗರ್-2020 ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಾಗುವುದು.

ಫೈನಲ್ ಸ್ಫರ್ಧೆಯ ತೀರ್ಪುಗಾರರಾಗಿ ಖ್ಯಾತ ಸಂಗೀತಗಾರ, ಚಲನಚಿತ್ರ ಸಂಗೀತ ನಿರ್ದೇಶಕ ಯಶವಂತ್ ಎಂ ಜಿ ಹಾಗೂ ಸಂಗೀತದಲ್ಲಿ ಡಾಕ್ಟರೇಟ್ ಪಡೆದಿರುವ ಸುಮಾರು 16000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡಿರುವ ಸಂಗೀತ ನಿರ್ದೇಶಕ ಕಿರಣ್ ಕುಮಾರ್ ಗಾನಸಿರಿ ಆಗವಿುಸಲಿದ್ದಾರೆ.

ಈ ಸಂದರ್ಭದಲ್ಲಿ ಸ್ಫರ್ಧೆಯ ಸೆಮಿಫೈನಲ್ ಹಂತದವರೆಗೆ ಆಗಮಿಸಿದ್ದ ಅಂಧ ಗಾಯಕಿ ಮೇಘನ ಇವರಿಗೆ ರೋಟರಿ ಬ್ರಹ್ಮಾವರ ವತಿಯಿಂದ ಸಹಾಯಾರ್ಥ ನಿಧಿ ಅರ್ಪಿಸುವ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮಕ್ಕೆ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುಂತೆ ಸಂಘಟಕರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕಾರ್ಯದರ್ಶಿ ಸತೀಶ್ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕ ಅಲ್ವಿನ್ ಅಂದ್ರಾದೆ ಹಾಗೂ ಮುಂದಿನ ಸಾಲಿನ ಅಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News