ಅಕ್ರಮ ಚಿನ್ನ ಸಾಗಾಟ: ಭಟ್ಕಳದ 13 ಮಂದಿ ವಶಕ್ಕೆ

Update: 2020-02-27 17:23 GMT

ಉಡುಪಿ, ಫೆ.27: ಎರಡು ಟವೇರಾ ಕಾರಿನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದ 11 ಮಂದಿಯನ್ನು ಕುಂದಾಪುರ ಪೊಲೀಸರು ಫೆ.26 ರಂದು ಬೆಳಗ್ಗೆ 11ಗಂಟೆಗೆ ಕುಂದಾಪುರ ವಡೇರಹೋಬಳಿಯ ಪ್ರಭು ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಭಟ್ಕಳದ ನವೀದ್ (23), ಮಹಮ್ಮದ್ ಖಲೀಲ್ ಕಝಿಯಾ(62), ಮುಹ್ಮಮದ್ ಆಸೀಮ್(23), ಫೈಝ್ ಅಹಮದ್ ಮಾವನ್(29), ಮುಹಮ್ಮದ್ ಆದ್ನಾನ್(25), ಮುಹಮ್ಮದ್ ಕಾಸಿಮ್ (25), ಉಮೈರ್ ಅಹ್ಮದ್(32), ಮುಝಮ್ಮಿಲ್(38), ಜಮೀಲ್ (42), ವಾಸಿಫ್ ಅಹಮದ್(27), ಮೀರಾ ಸಮೀರ್(34) ಎಂದು ಗುರುತಿಸಲಾಗಿದೆ.

ಇವರು ದುಬೈಯಿಂದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದರು. ಬಳಿಕ ಅಲ್ಲಿಂದ ಎರಡು ತವೇರಾ ಕಾರಿನಲ್ಲಿ ಭಟ್ಕಳಕ್ಕೆ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡು ತ್ತಿದ್ದರೆನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಎಸ್ಪಿ ವಿಷ್ಣುವರ್ದನ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನದಂತೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಉಡುಪಿ ಡಿವೈಎಸ್ಪಿ ಜೈಶಂಕರ್ ಮಾರ್ಗದರ್ಶನ ದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಇವರಿಂದ 46 ಲಕ್ಷ ರೂ. ಮೌಲ್ಯದ ಒಟ್ಟು 1152.47ಗ್ರಾಂ ತೂಕದ ಚಿನ್ನದ ಕಾಯಿನ್‌ಗಳನ್ನು ಹಾಗೂ 10ಲಕ್ಷ ರೂ. ಮೌಲ್ಯದ ಎರಡು ತವೇರಾ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರನ್ನು ಹೆಚ್ಚಿನ ವಿಚಾರಣೆಗಾಗಿ ಕಮಿಷನರ್ ಆಫ್ ಕಸ್ಟಮ್ ಮಂಗಳೂರು ಇವರಿಗೆ ಹಸ್ತಾಂತರಿಸಲಾಗಿದೆ.

ಅದೇ ರೀತಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯಕ್ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರಿನಿಂದ ಭಟ್ಕಳಕ್ಕೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಂದ 9ಲಕ್ಷ ರೂ. ಮೌಲ್ಯದ 231 ಗ್ರಾಂ ತೂಕದ ಚಿನ್ನನ್ನು ಸ್ವಾಧೀನ ಪಡೆಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News