ಮಂಗಳೂರು ಮನಪಾ ನೂತನ ಮೇಯರ್ ಆಗಿ ದಿವಾಕರ, ಉಪಮೇಯರ್ ವೇದಾವತಿ ಆಯ್ಕೆ

Update: 2020-02-28 08:10 GMT

ಮಂಗಳೂರು, ಫೆ.28: ಮಂಗಳೂರು ಮಹಾನಗರ ಪಾಲಿಕೆಯ 21ನೇ ಅವಧಿಗೆ ನೂತನ ಮೇಯರ್ ಆಗಿ 46ನೇ ಕಂಟೋನ್ಮೆಂಟ್ ವಾರ್ಡ್‌ನ ಬಿಜೆಪಿಯ ದಿವಾಕರ ಪಾಂಡೇಶ್ವರ ಚುನಾಯಿತರಾಗಿದ್ದಾರೆ ಮತ್ತು ಉಪ ಮೇಯರ್ ಆಗಿ ಅದೇ ಪಕ್ಷದ 9ನೇ ಕುಳಾಯಿ ವಾರ್ಡ್‌ನ ಕಾರ್ಪೊರೇಟರ್ ವೇದಾವತಿ ಚುನಾಯಿತರಾಗಿದ್ದಾರೆ.
 
ಇಂದು ಪೂರ್ವಾಹ್ನ ಪ್ರಥಮವಾಗಿ ಪಾಲಿಕೆಗೆ ಹೊಸದಾಗಿ ಆಯ್ಕೆಯಾದ 60 ಕಾರ್ಪೊರೇಟರ್‌ಗಳ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಪಾಲಿಕೆ ನೂತನ ಪರಿಷತ್ ಅಸ್ತಿತ್ವಕ್ಕೆ ಬಂತು. ಆನಂತರ ಚುನಾವಣಾಧಿಕಾರಿ, ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ. ಯಶವಂತ್ ನೇತೃತ್ವದಲ್ಲಿ ಮೇಯರ್- ಉಪಮೇಯರ್ ಚುನಾವಣೆ ನಡೆಯಿತು.

ಮೇಯರ್ ಸ್ಥಾನ ಹಿಂದುಳಿದ ವರ್ಗ ಎ, ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯಡಿ ಚುನಾವಣೆ ನಡೆಯಿತು. ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ದಿವಾಕರ ಪಾಂಡೇಶ್ವರ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ ಕೇಶವ ನಾಮಪತ್ರ ಸಲ್ಲಿಸಿದ್ದರು.

ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಜತೆ ಪಾಲಿಕೆಗೆ ಚುನಾಯಿತರಾದ 60 ಜನಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ 44, ಕಾಂಗ್ರೆಸ್ 14, ಎಸ್‌ಡಿಪಿಐ 2 ಸದಸ್ಯರು ಉಪಸ್ಥಿತರಿದ್ದರು.

ಕೈ ಎತ್ತುವ ಮೂಲಕ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿಯ ದಿವಾಕರ ಪಾಂಡೇಶ್ವರ ಪರವಾಗಿ 46 ಮತಗಳು(ಇಬ್ಬರು ಶಾಸಕರ ಮತ ಸೇರಿ) ಚಲಾವಣೆಯಾಯಿತು. ಈ ಮೂಲಕ ಪಾಲಿಕೆಯ ನೂತನ ಮೇಯರ್ ಆಗಿ ನಿರೀಕ್ಷೆಯಂತೆ ದಿವಾಕರ ಪಾಂಡೇಶ್ವರ ಆಯ್ಕೆಯಾದರು.

ಕಾಂಗ್ರೆಸ್ ಅಭ್ಯರ್ಥಿ ಕೇಶವ ಅವರ ಪರವಾಗಿ 15 (14 ಮಂದಿ ಸದಸ್ಯರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರು ಸೇರಿ) ಮತಗಳು ಚಲಾವಣೆಯಾದವು. ಎಸ್‌ಡಿಪಿಐನ ಇಬ್ಬರು ಸದಸ್ಯರು ತಟಸ್ಥವಾಗಿ ಉಳಿದಿದ್ದರು.

ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನಿಂದ ಝೀನತ್ ಸಂಶುದ್ದೀನ್ ಹಾಗೂ ಬಿಜೆಪಿಯಿಂದ ಜಾನಕಿ ಯಾನೆ ವೇದಾವತಿ ಸ್ಪರ್ಧಿಸಿದ್ದರು. ಝೀನತ್ ಪರವಾಗಿ 17 ಮತಗಳು (ಎಸ್ ಡಿಪಿಐನ ಎರಡು ಮತಗಳು ಸೇರಿ) ಹಾಗೂ ವೇದಾವತಿ ಪರವಾಗಿ 46 ಮತಗಳು ಚಲಾವಣೆಯಾದವು. ನೂತನ ಉಪ ಮೇಯರ್ ಆಗಿ ಬಿಜೆಪಿಯ ವೇದಾವತಿ ಆಯ್ಕೆಯಾದರು.

ನೂತನ ಮೇಯರ್ ಆಗಿ ಆಯ್ಕೆಗೊಂಡ ದಿವಾಕರ ಅವರು ಕಂಟೋನ್ಮೆಂಟ್ ವಾರ್ಡ್ ನಂ.46ರಿಂದ ಸತತ ಮೂರನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ಉಪ ಮೇಯರ್ ವೇದಾವತಿ ಅವರು ಕುಳಾಯಿ ವಾರ್ಡ್ ನಂ.9ರಿಂದ ಎರಡನೇ ಬಾರಿ ಆಯ್ಕೆಗೊಂಡಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಅಧಿಕಾರಿಗಳಿಂದ ಕಾರ್ಯನಿರ್ವಹಿಸಲ್ಪಡುತ್ತಿದ್ದ ಮನಪಾದಲ್ಲಿ ಶುಕ್ರವಾರದಿಂದ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಆರಂಭಗೊಂಡಿತು.

2019ರ ನ.12ರಂದು ಪಾಲಿಕೆಗೆ ನಡೆದ ಚುನಾವಣೆಯಲ್ಲಿ 60 ವಾರ್ಡ್‌ಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14, ಎಸ್‌ಡಿಪಿಐ 2 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆದರೆ, ಮೇಯರ್ ಮೀಸಲಾತಿ ಕುರಿತಂತೆ ಎದ್ದಿದ್ದ ಗೊಂದಲದ ಕಾರಣದಿಂದ ಮೂರು ತಿಂಗಳಿನಿಂದ ಮೇಯರ್-ಉಪಮೇಯರ್ ಆಯ್ಕೆ ನಡೆದಿರಲಿಲ್ಲ. ಬಳಿಕ ಈ ತಿಂಗಳ ಆರಂಭದಲ್ಲಿ 2ನೇ ಅವಧಿಯ ಮೀಸಲಾತಿಯಡಿ ಚುನಾವಣೆ ನಡೆಸುವಂತೆ ರಾಜ್ಯ ಸರಕಾರ ಪಾಲಿಕೆಗೆ ಸೂಚನೆ ನೀಡಿತ್ತು. ಅದರಂತೆ ಕೆಲ ದಿನಗಳ ಹಿಂದೆ ಪ್ರಾದೇಶಿಕ ಆಯುಕ್ತರು ಫೆ.28ರಂದು ಮೇಯರ್- ಉಪಮೇಯರ್ ಚುನಾವಣೆ ನಡೆಸುವಂತೆ ಮಂಗಳೂರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆದಿದೆ.

ಅಪರ ಪ್ರಾದೇಶಿಕ ಆಯುಕ್ತ ಕೆ.ಎಂ.ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News